ಹಾಸನ: ಹಾಸನದ ಮಲೆನಾಡು ಭಾಗದಲ್ಲಿ ಹಿಂದೆಂದೂ ಕಂಡರಿಯದ ಮಳೆಯಾಗುತ್ತಿದೆ. ಚಿಕ್ಕಮಗಳೂರಿನ ಮೂಡಿಗೆರೆ ಭಾಗದಲ್ಲಿ ಸುರಿಯುತ್ತಿರುವ ಅತಿಹೆಚ್ಚು ಮಳೆಯಿಂದ ಹಾಸನ ಜಿಲ್ಲೆಯ ಜೀವನಾಡಿಯಾಗಿರುವ ಹೇಮಾವತಿ ಜಲಾಶಯ ತುಂಬಿ ತುಳುಕುತ್ತಿದ್ದು, ಒಳ ಹರಿವು ಹೆಚ್ಚಾಗಿದೆ. ದಿನಕ್ಕೆ ಮೂವತ್ತು ಸಾವಿರ ಕ್ಯೂಸೆಕ್ ನೀರು ಜಲಾಯಶಕ್ಕೆ ಹರಿದು ಬರುತ್ತಿರುವ ನಿಟ್ಟಿನಲ್ಲಿ ಹೇಮಾವತಿ ನದಿ ಪಾತ್ರದಲ್ಲಿರುವ ಹಳ್ಳಿಗಳ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಡಳಿತ ಮನವಿ ಮಾಡಿದೆ. ಜೊತೆಗೆ ಸದ್ಯದ ಪರಿಸ್ಥಿತಿಗೆ ಅನುಗುಣವಾಗಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಹೇಮಾವತಿ ಜಲಾಶಯದಲ್ಲಿ ಸಂಗ್ರಹವಾದ ನೀರು:
ಈಗಾಗಲೇ ಹೇಮಾವತಿ ಜಲಾಶಯದಲ್ಲಿ 28.449 ಟಿಎಂಸಿ ನೀರು ಸಂಗ್ರಹವಾಗಿದೆ. ಕೇವಲ ಎರಡು ದಿನಗಳಲ್ಲಿ 10 ಟಿಎಂಸಿ ನೀರು ಡ್ಯಾಂಗೆ ಹರಿದು ಬಂದಿದ್ದು, ಸಕಲೇಶಪುರದ ಸಕಲೇಶ್ವರ ದೇವಾಲಯ ಮತ್ತು ಶೆಟ್ಟಿಹಳ್ಳಿಯ ಹಿನ್ನೀರಿನಲ್ಲಿ ಇರುವಂತಹ ಹಳೇಯ ಚರ್ಚ್ ಮುಳುಗುವ ಹಂತ ತಲುಪಿದೆ. ಹೀಗಾಗಿ ಇಂತಹ ದೃಶ್ಯವನ್ನು ನೋಡಲು ಈಗ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.