ಹಾಸನ: ದೇವೇಗೌಡ್ರು ಪ್ರಧಾನಿಯಾಗದಿದ್ದರೆ ಹಾಸನ, ಮೈಸೂರು, ಬೆಂಗಳೂರು ರೈಲ್ವೆ ಮಾರ್ಗವೇ ಆಗುತ್ತಿರಲಿಲ್ಲ. ಇವತ್ತು ಅವರ ಕೊಡುಗೆಯಿಂದ ದಿನದಲ್ಲಿ 18 ರೈಲುಗಳು ಸಂಚರಿಸುತ್ತಿವೆ ಎಂದು ತಮ್ಮ ತಂದೆಯ ಸಾಧನೆಯನ್ನು ಪುತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ಕೊಂಡಾಡಿದರು.
ಹಾಸನದ ಬೇಲೂರಿನಲ್ಲಿ ಇಂದು ಹಮ್ಮಿಕೊಂಡಿದ್ದ ಲೋಕಸಭಾ ಚುನಾವಣೆ ಬಹಿರಂಗ ಪ್ರಚಾರದ ವೇಳೆ ಮಾತನಾಡಿದ ಅವರು, ಬಿಜೆಪಿ ವಿರುದ್ಧ ಮತ್ತೊಮ್ಮೆ ಗುಡುಗಿದರು. ಮಾಧ್ಯಮದವರಿಗೆ ನಾನು ಸದಾ ಚಿರಋಣಿಯಾಗಿರುವೆ. 1978 ರಿಂದ ನನ್ನ ತಪ್ಪು ಸರಿಗಳನ್ನು ತಿದ್ದಿ ತೀಡಿ ಮಾಧ್ಯಮದಲ್ಲಿ ತೋರಿಸಿದ್ದಕ್ಕೆ ಹೈಟೆಕ್ ಎಂಎಲ್ಎ ಆಗಿ ನಾನು ಹತ್ತು ವರ್ಷ ಮಂತ್ರಿಯಾಗಿದ್ದೇನೆ ಅಂತ ಚುನಾವಣಾ ಪ್ರಚಾರದ ವೇಳೆ ಹಾಸ್ಯ ಚಟಾಕಿ ಹಾರಿಸಿದರು.
ಚುನಾವಣೆಗೆ ನಿಲ್ಲುವುದು ಬಿಡುವುದು ಅವರ ವೈಯಕ್ತಿಕ ವಿಚಾರ. ಜನಪ್ರತಿನಿಧಿಯ ಕೆಲಸವನ್ನು ಗಮನಿಸುವ ಮತದಾರ ದೇವರುಗಳು ಯಾರನ್ನು ಗೆಲ್ಲಿಸಬೇಕು ಎಂದು ನಿರ್ಧರಿಸುತ್ತಾರೆ. ಜನಪ್ರತಿನಿಧಿಗಳು ಗೆದ್ದ ಬಳಿಕ ಮತದಾರರ ಸೇವಕರಂತೆ ಕೆಲಸ ಮಾಡಿ ಜಿಲ್ಲೆಯ ಅಭಿವೃದ್ಧಿ ಮಾಡಬೇಕು. ಅಂತಹ ಕೆಲಸವನ್ನು ನಾನು ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಲೋಕೋಪಯೋಗಿ ಸಚಿವನಾಗಿ, ಜಿಲ್ಲಾ ಉಸ್ತುವಾರಿ ಸಚಿವನಾಗಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ.ಜೆಡಿಎಸ್ ಪಕ್ಷಕ್ಕಾಗಿ, ದೇಶದ ಅಭಿವೃದ್ಧಿಗಾಗಿ ನಮ್ಮ ತಂದೆ ದೇವೇಗೌಡರು ದುಡಿದಿದ್ದಾರೆ ಎಂದರು.
ಹಾಸನ ಕ್ಷೇತ್ರಕ್ಕಾಗಿ ಸಾಕಷ್ಟು ಕೊಡುಗೆಗಳನ್ನು ಕೊಟ್ಟಿರುವ ದೇವೇಗೌಡ್ರು ಕ್ಷೇತ್ರವನ್ನು, ಜನರ ಪ್ರೀತಿಯನ್ನು ಬಿಟ್ಟುಕೊಡುವಂತಹ ಸಂದರ್ಭದಲ್ಲಿ ನೋವು ಸರ್ವೇ ಸಾಮಾನ್ಯ. ದೇವೇಗೌಡ್ರಿಗೆ ದುಃಖ ತಡೆಯಲಾಗದೆ ಕಣ್ಣೀರಿಟ್ಟರು. ಅವರ ಕಣ್ಣೀರನ್ನು ನೋಡಿ ನನಗೆ ದುಃಖ ಉಮ್ಮಳಿಸಿತು. ಹಾಗಾಗಿ ಮಾಜಿ ಪ್ರಧಾನಿ ದೇವೇಗೌಡರು ನಿನ್ನೆ ಭಾವುಕರಾಗಿ ಕಣ್ಣೀರಿಟ್ಟರು. ಅಂತಹ ಘಟನೆಯನ್ನು ಕೆಲ ಪಕ್ಷದ ಮುಖಂಡರು ವ್ಯಂಗ್ಯವಾಡಿದ್ದಾರೆ. ಆದರೆ ಚುನಾವಣೆಯಲ್ಲಿ ಸೋಲು-ಗೆಲುವು ಸರ್ವೇ ಸಾಮಾನ್ಯ. ಅಂತಹ ಸೋಲಿಗೆ ನಾನು ಹೆದರಿ ಕಣ್ಣೀರು ಹಾಕುವುದಿಲ್ಲ. ನಮ್ಮನ್ನ ಟೀಕಿಸುವ ಬಿಜೆಪಿ ನಾಯಕರಿಗೆ ನಾಚಿಕೆ ಆಗಬೇಕು ಅಂತ ಗುಡುಗಿದರು.
ಹಾಸನದಲ್ಲಿ ಲೋಕಸಭಾ ಚುನಾವಣೆ ಬಹಿರಂಗ ಪ್ರಚಾರದಲ್ಲಿ ಹೆಚ್.ಡಿ.ರೇವಣ್ಣ. ಬಿಜೆಪಿ ಅವರು ಕೂಡ ಐದು ವರ್ಷ ಅಧಿಕಾರ ಅನುಭವಿಸಿದ್ದರು. ಆದರೆ ಜಿಲ್ಲೆಗೆ ಕೊಟ್ಟಿರುವ ಕೊಡುಗೆ ಏನು ಎಂಬುದನ್ನು ಹೇಳಲಿ. ಜನತೆ ಕೊಟ್ಟ ಅಧಿಕಾರವನ್ನು ಅನುಭವಿಸಿದ್ರೇ ಹೊರತು ಯಾವುದೇ ರೀತಿಯ ಅಭಿವೃದ್ಧಿ ಕೆಲಸಗಳನ್ನು ಮಾಡ್ಲಿಲ್ಲ. ಅಭಿವೃದ್ಧಿ ಕೆಲಸಗಳಿಗೆ ಮತ್ತೆ ಕುಮಾರಸ್ವಾಮಿ ಅವರೇ ಬರಬೇಕಾಯಿತು. ಕೇವಲ ಏಳು ತಿಂಗಳಲ್ಲಿ ಕುಮಾರಸ್ವಾಮಿ ಯಾವೆಲ್ಲಾ ಅಭಿವೃದ್ಧಿ ಮಾಡಿದ್ದಾರೆ ಎಂಬುದನ್ನು ಮನಗಾಣಲಿ. ನಾನು ನಾಲ್ಕು ವರ್ಷ ಮಂತ್ರಿಯಾಗಿದ್ದ ಸಂದರ್ಭದಲ್ಲಿ ನಾನು ಏನಾದರೂ ಅಕ್ರಮಗಳನ್ನು ಎಸಗಿದ್ದರೆ ನನ್ನ ವಿರುದ್ಧ ತನಿಖೆಯಾಗಲಿ ಎಂದು ಬರೆದುಕೊಟ್ಟ ಏಕೈಕ ಮಂತ್ರಿ ಯಾರಾದರೂ ಇದ್ದರೆ ಅದು ರೇವಣ್ಣ ಮಾತ್ರ ಅಂತ ತಮ್ಮನ್ನು ತಾವು ಬೆನ್ನು ತಟ್ಟಿಕೊಂಡರು.