ಹಾಸನ: ಪ್ರೀತಿ ಒಂದು ಮಾಯೆ. ಈ ಮಾಯೆಯ ಬಲೆಯೊಳಗೆ ಬಿದ್ದ ಅದೆಷ್ಟೋ ಜೀವಗಳು ತಮ್ಮ ಜೀವನವನ್ನೇ ಹಾಳು ಮಾಡಿಕೊಂಡ ಉದಾಹರಣೆಗಳಿವೆ. ಒಂದೊಮ್ಮೆ ನೀನೆ ನನ್ನ ಜಗತ್ತು ಎಂದವಳು ಬಿಟ್ಟು ಹೋದಾಗ ಪ್ರಿಯತಮನ ಸ್ಥಿತಿ ದಿಕ್ಕು ತೋಚದಂತಾಗುತ್ತದೆ.
ಅವರಿಬ್ಬರು 5 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಪ್ರೇಮಿಗಳು. ಆದರೆ, ಮನೆಯವರ ಒಪ್ಪಿಗೆ ಸಿಗದಿದ್ದಾಗ, ಕುಟುಂಬದ ವಿರುದ್ಧವಾಗಿಯೇ ಅಜಯ್ ಮತ್ತು ಆತನ ಪ್ರಿಯತಮೆ ವಿವಾಹ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾಗಿ ವಾರವೂ ಕಳೆದಿರಲಿಲ್ಲ. ಮನ ಮೆಚ್ಚಿದ ಮಡದಿ ತನ್ನ ಹೆತ್ತವರ ಕಣ್ಣೀರಿಗೆ ಕರಗಿ ಗಂಡನನ್ನು ತೊರೆದಿದ್ದಾಳೆ. ಪ್ರಿಯತಮೆಯನ್ನು ಕಳೆದುಕೊಂಡ ವಿರಹ ವೇದನೆ ಪ್ರಿಯತಮನನ್ನು ಚುಚ್ಚಿ ಕೊಲ್ಲುತ್ತಿದೆ. ತನ್ನವಳನ್ನು ತನಗೆ ಮರಳಿ ಕೊಡಿಸುವಂತೆ ಯುವಕ ಗೋಗರೆಯುತ್ತಿದ್ದಾನೆ. ಹಾಸನ ಜಿಲ್ಲೆಯ ಅರಸಿಕೆರೆ ತಾಲೂಕಿನ ಹಾರನಹಳ್ಳಿ ತಾಂಡಾ ನಿವಾಸಿಯಾಗಿರುವ ಅಜಯ್, ಸದ್ಯ ಫ್ಲವರ್ ಡೆಕೋರೇಟರ್ ಕೆಲಸ ಮಾಡಿಕೊಂಡಿದ್ದಾನೆ.
50 ಸಾವಿರ ದಂಡ ಕಟ್ಟಿ ಮದುವೆಯಾಗಿದ್ದರು :
ತಾಂಡಾಗಳಲ್ಲಿ ವಾಸಿಸುವ ಲಂಬಾಣಿ ಜನಾಂಗದವರು ತಮ್ಮ ಜಾತಿಯವರನ್ನಲ್ಲದೇ ಬೇರೆಯವರನ್ನ ಮದುವೆಯಾಗುವಂತಿಲ್ಲ. ಹಾಗೇನಾದ್ರೂ ಮದುವೆಯಾಗಿ ಬಂದ್ರೆ ಊರಿನ ಪಂಚಾಯತ್‌ಗೆ 50 ಸಾವಿರ ರೂ. ದಂಡ ಕಟ್ಟಬೇಕು. ಹಾಗಾಗಿ ಅಜಯ್ ಮನೆಯವರು ಊರಿನ ಪಂಚಾಯತ್‌ಗೆ 50 ಸಾವಿರ ರೂ. ದಂಡ ಕಟ್ಟಿ ಗ್ರಾಮಸ್ಥರ ಸಮ್ಮುಖದಲ್ಲಿಯೇ ಮದುವೆಯಾಗಿದ್ದರು.