ಹಾಸನ: ರಾಜ್ಯದಲ್ಲಿ ಮುಂಬರುವ ಎರಡು ಉಪ ಚುನಾವಣೆಯಲ್ಲಿ ಜೆಡಿಎಸ್ ಗೆಲುವು ಸಾಧಿಸಲಿದೆ. ಸಿಂದಗಿಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಉತ್ತಮ ಫಲಿತಾಂಶ ದೊರೆಯಲಿದೆ ಎಂದು ಹೆಚ್ ಡಿ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ವಿರುದ್ಧ ಹೆಚ್ಡಿಕೆ ಕೆಂಡಾಮಂಡಲ ಜನ್ರಿಗೆ ಕೊಳಚೆ ನೀರು ಕುಡಿಸ್ತೀರಾ?
ಜಿಲ್ಲೆಯ ಸಕಲೇಶಪುರ ಸಮೀಪದ ಎತ್ತಿನಹೊಳೆ ಯೋಜನೆ ಕಾಮಗಾರಿ ಸ್ಥಳ ಪರಿಶೀಲನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಯಲುಸೀಮೆ ಜಿಲ್ಲೆಗಳಿಗೆ ನೀರು ಒದಗಿಸುವ ಮಹತ್ವದ ಎತ್ತಿನಹೊಳೆ ಯೋಜನೆಗೆ ನನ್ನ ವಿರೋಧ ಇಲ್ಲ.
ಆದರೆ, ಯೋಜನೆ ಆರಂಭವಾಗಿ ಹಲವು ವರ್ಷ ಕಳೆದಿವೆ. ಎಷ್ಟು ದಿನ ಜನರಿಗೆ ಕೊಳಚೆ ನೀರು ಕುಡಿಸುತ್ತೀರಾ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಜನ್ರಿಗೆ ಎಷ್ಟು ದಿನ ಅಂತಾ ಕೊಳಚೆ ನೀರು ಕುಡಿಸ್ತೀರಿ.. ಸರ್ಕಾರಕ್ಕೆ ಹೆಚ್ಡಿಕೆ ಪ್ರಶ್ನೆ ಸಿದ್ದರಾಮಯ್ಯ ವಿರುದ್ಧವೂ ಹೆಚ್ಡಿಕೆ ಕಿಡಿ
ಸಿದ್ದರಾಮಯ್ಯ ಜನ್ರಿಗೆ ಮೋಸ ಮಾಡಿದ್ದಾರೆ. ಮೂರು ವರ್ಷದೊಳಗೆ ಎತ್ತಿನಹೊಳೆ ಯೋಜನೆ ಕಾಮಗಾರಿ ಪೂರೈಸಿ ನೀರನ್ನ ಒದಗಿಸುತ್ತೀವಿ ಎಂದು ಉದ್ದುದ್ದ ಭಾಷಣ ಬಿಗಿಯುತ್ತಿದ್ರು. ಈಗ ಅದರ ಬಗ್ಗೆ ಮಾತಿಲ್ಲ. ಕೂಡಲೇ ಅವರು, ಸರ್ಕಾರದ ಗಮನ ಸೆಳೆದು ಕಾಮಗಾರಿ ಶೀಘ್ರ ಮುಗಿಯುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದ್ರು.
8 ರಿಂದ 20 ಸಾವಿರ ಕೋಟಿಗೆ ತಲುಪಿದ ಯೋಜನೆ
8 ಸಾವಿರ ಕೋಟಿ ರೂ. ಯೋಜನೆಯು ಇಂದು 23 ಸಾವಿರ ಕೋಟಿ ರೂ. ತಲುಪಿದೆ. ಹಣದ ಬಗ್ಗೆ ಯೋಚಿಸುತ್ತಿಲ್ಲ. ಯೋಜನೆ ಕಾರ್ಯಗತವಾಗಿ ಉತ್ತಮ ಫಲಿತಾಂಶ ಬರಬೇಕು. ಮೊದಲ ಹಂತದ ಕಾಮಗಾರಿ ಪೂರ್ಣಗೊಳಿಸಿ ಪ್ರಾಯೋಗಿಕವಾಗಿ ನೀರು ಮೇಲೆತ್ತುವ ಕಾರ್ಯ ಆಗಬೇಕು. ಇಂತಹ ಯಾವುದೇ ಬೃಹತ್ ಯೋಜನೆಗೆ ಡಿಪಿಆರ್ ತಯಾರಿಸಬೇಕು. ಆದರೆ, ಈ ಯೋಜನೆಯಲ್ಲಿ ಕೇವಲ ಲೈನ್ ಎಸ್ಟಿಮೇಟ್ ಆಗುತ್ತಿದೆ. ಇದರಿಂದಾಗಿ ನಿಗದಿತ ಸಮಯದಲ್ಲಿ ಕಾಮಗಾರಿ ಮುಗಿಯುತ್ತಿಲ್ಲ. ಬದಲಾಗಿ ಹಣ ಖರ್ಚಾಗುತ್ತಿದೆ ಎಂದರು.
ಭೂಸ್ವಾಧೀನ ವಿವಾದ ಬೇಗ ಬಗೆಹರಿಸಿ
ಯೋಜನೆಗೆ ಭೂಮಿ ನೀಡಿದ ರೈತರಿಗೆ ಪರಿಹಾರ ನೀಡಲು ಸರ್ಕಾರದ ಬಳಿ ಹಣವಿಲ್ಲ. ಆದರೆ, ಗುತ್ತಿಗೆದಾರರಿಗೆ ನಿಗದಿತ ಸಮಯದಲ್ಲಿ ಹಣ ನೀಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಯೋಜನೆಯ ಮೊದಲ ಹಂತದಲ್ಲಿ ಬಾಕಿಯಿರುವ ಒಂಬತ್ತು ಕಿ.ಮೀ. ಭೂಸ್ವಾದೀನ ವಿವಾದ ಆದಷ್ಟು ಬೇಗ ಬಗೆಹರಿಸಬೇಕು ಎಂದರು.
ರಸ್ತೆ ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿಲ್ಲ
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಸನ-ಸಕಲೇಶಪುರ ಮಾರ್ಗದ ರಸ್ತೆ ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಪ್ರತಿದಿನ ನೂರಾರು ಮಂದಿ ಧರ್ಮಸ್ಥಳ, ಸುಬ್ರಹ್ಮಣ್ಯ ಸೇರಿ ಮಂಗಳೂರಿಗೆ ಪ್ರಯಾಣ ಬಳಸುವವರಿಗೆ ತೀವ್ರ ತೊಂದರೆಯಾಗಿದೆ. ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಸಚಿವರು ಕೂಡಲೇ ಸಭೆ ನಡೆಸಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಆನೆ ಹಾವಳಿ ನಿಗ್ರಹಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು
ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಕಾಡಾನೆ ಹಾವಳಿ ಇದೆ. ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಆನೆ ಹಾವಳಿ ತಡೆಯುವ ನಿಟ್ಟಿನಲ್ಲಿ ರೈಲ್ವೆ ಹಳಿ ತಡೆಗೋಡೆ ನಿರ್ಮಾಣ ಸಂಬಂಧ ಹಣ ಮಂಜೂರು ಮಾಡಲಾಗಿತ್ತು. ಇತ್ತೀಚೆಗೆ ನಡೆದ ಅಧಿವೇಶನದಲ್ಲಿ ಶಾಸಕ ಶಿವಲಿಂಗೇಗೌಡ ಅವರು ಸಹ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ. ಆನೆ ಹಾವಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮಕೈಗೊಳ್ಳುವುದು ಅತ್ಯಗತ್ಯ ಎಂದರು.
ಸಾಲಮನ್ನಾ ಮಾಡದಂತೆ ಕ್ರಮ ವಹಿಸಿ
ಚನ್ನರಾಯಪಟ್ಟಣ ತಾಲೂಕಿನ ಉದಯಪುರ ಕರ್ನಾಟಕ ಗ್ರಾಮೀಣ ಬ್ಯಾಂಕ್ನಲ್ಲಿ ರೈತರ ಖಾತೆಗಳಿಗೆ ಬಂದಂತಹ ಹಾಲು ಮಾರಾಟದ ಹಣವನ್ನು ಬ್ಯಾಂಕಿನ ಸಾಲಕ್ಕೆ ಜಮಾ ಮಾಡಿಕೊಳ್ಳುತ್ತಿರುವುದನ್ನು ಹೆಚ್ಡಿಕೆ ಖಂಡಿಸಿದ್ರು. ಜಿಲ್ಲಾಧಿಕಾರಿಗಳು ಕೂಡಲೇ ಬ್ಯಾಂಕ್ನ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಹಣವನ್ನು ಸಾಲಕ್ಕೆ ಮನ್ನಾ ಮಾಡದಂತೆ ಕ್ರಮವಹಿಸುವಂತೆ ಸೂಚನೆ ನೀಡಬೇಕು ಎಂದು ಆಗ್ರಹಪಡಿಸಿದರು.
ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ರಿತುರಾಜ್ ಅವಸ್ತಿ ನೇಮಕ