ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಸನ: ನಂದಿನಿ ಉತ್ಪನ್ನಗಳಿಗೆ ಅಂಬಾಸಿಡರ್ ಆಗಿ ಕೆಲಸ ಮಾಡಿದ ದಿ.ಡಾ ರಾಜ್ಕುಮಾರ್ ಹಾಗೂ ದಿ.ಪುನೀತ್ ರಾಜ್ಕುಮಾರ್ ಅವರ ಆಚಾರ - ವಿಚಾರಗಳನ್ನು ಪ್ರಚಾರ ಮಾಡುವ ಮೂಲಕ ನಂದಿನಿ ಉತ್ಪನ್ನ ಖರೀದಿಸಿ ರೈತರ ಬದುಕಿಗೆ ಸಹಕಾರಿಯಾಗೋಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.
ನಗರದ ಹೇಮಾವತಿ ಪ್ರತಿಮೆ ಬಳಿ ಇರುವ ನಂದಿನಿ ಉತ್ಪನ್ನಗಳ ಮಳಿಗೆಗೆ ಭೇಟಿ ನೀಡಿ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಇದು ಕರ್ನಾಟಕ ರಾಜ್ಯದ ಎಲ್ಲ ರೈತರ ಬದುಕಿನ ಪ್ರಶ್ನೆಯಾಗಿದೆ. ಸುಮಾರು 70 ಲಕ್ಷ ಜನ ರೈತರು ಹಾಲು ಉತ್ಪಾದನೆ ಮಾಡುತ್ತಿದ್ದಾರೆ. ನಂದಿನಿ ರೈತರು ಕಟ್ಟಿದಂತಹ ಸಂಸ್ಥೆ. ಲೀಟರ್ ಗೆ 27-28 ರೂ ಕೊಡುತ್ತಾರೆ. ಸರ್ಕಾರ 5 ರೂ. ಸಹಾಯಧನ ಕೊಡುತ್ತಿದೆ. ಗುಜರಾತ್ನ ಅಮುಲ್ ಕೂಡ ರೈತರದ್ದು. ನಮ್ಮ ತಕರಾರೇನಿಲ್ಲ. ಆದರೆ, ನಮ್ಮನ್ನು ಹಿಂದೆ ತಳ್ಳಿ ಅಮುಲ್ ಸಂಸ್ಥೆಯನ್ನು ಸರ್ಕಾರ ಪ್ರೋತ್ಸಾಹ ಮಾಡುವ ಕೆಲಸ ಮಾಡುತ್ತಿರುವುದು ಸರಿಯಲ್ಲ ಎಂದರು.
ಈ ನಂದಿನಿ ನಮ್ಮದು. ನಮ್ಮ ಹಾಲು ನಮ್ಮ ಬದುಕು. ಎಲ್ಲ ಬೆಲೆಗಳು ಹೆಚ್ಚಾಗಿವೆ. ಆದರೆ, ರೈತರಿಗೆ ಯಾವ ತರಹದ ಸಹಾಯವಾಗಿಲ್ಲ. ರೈತರಿಗೆ ಹಾಲು ಉತ್ಪಾದನೆ ಮಾಡಲು ಸರ್ಕಾರ ಸಹಾಯ ಮಾಡಿಲ್ಲ. ಈ ಮಧ್ಯೆ ನಮ್ಮ ಹಾಲನ್ನು ನಾವು ಮಾರಾಟ ಮಾಡಲು ಆಗದಿರುವ ಪರಿಸ್ಥಿತಿ ಇದೆ. ಹಾಗಾಗಿ ನಾವೇ ಪ್ರೋತ್ಸಾಹ ಕೊಟ್ಟು ಹಾಲು ಉತ್ಪಾದನೆ ಮಾಡಲು ಹೊರಟಿದ್ದೇವೆ. ಹಾಲಿನ ಉತ್ಪನ್ನಗಳಾದ ಮೈಸೂರು ಪಾಕ್, ಪೆಡಾ, ಬಿಸ್ಕೆಟ್, ಚಾಕೊಲೇಟ್ನ್ನು ಪಕ್ಷದ ಅಧ್ಯಕ್ಷನಾಗಿ ಖರೀದಿ ಮಾಡಿದ್ದೇನೆ. ನಮ್ಮ ರೈತರನ್ನು ಉಳಿಸಿಕೊಳ್ಳಬೇಕು, ನಮ್ಮ ನಂದಿನಿಯನ್ನು ಉಳಿಸಿಕೊಳ್ಳಬೇಕು ಎಂದು ಡಿಕೆಶಿ ಕರೆ ನೀಡಿದರು.
ಡಿಕೆಶಿ ಆರೋಪಕ್ಕೆ ಸಿಎಂ ಬೊಮ್ಮಾಯಿ ತಿರುಗೇಟು:"ನಂದಿನಿ ನಮ್ಮ ರಾಜ್ಯದ ಉತ್ತಮ ಬ್ರ್ಯಾಂಡ್, ಚುನಾವಣಾ ಸಮಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ರಾಜಕೀಯ ಮಾಡುತ್ತಿವೆ" ಎಂದು ಸಿಎಂ ಬಸವರಾಜ ಬೊಮ್ಮಾಯಿ ದೆಹಲಿಯಲ್ಲಿ ತಿರುಗೇಟು ನೀಡಿದ್ದಾರೆ.
ಮಾತು ಮರೆತು ಬಿಟ್ರಾ ಮುಖ್ಯಮಂತ್ರಿಗಳೇ?: ನಮ್ಮ ರೈತರನ್ನು ಉಳಿಸಿಕೊಳ್ಳಬೇಕು ಎಂದು ಡಾ. ರಾಜ್ಕುಮಾರ್, ಆದಾದ ಮೇಲೆ ಪುನೀತ್ ರಾಜ್ಕುಮಾರ್ ಅವರು ನಂದಿನಿ ಹಾಲಿಗೆ ಪ್ರಚಾರಕರಾಗಿದ್ದರು. ಮುಖ್ಯಮಂತ್ರಿಗಳೇ ನೀವು ಅವರ ಬಗ್ಗೆ ಇಷ್ಟು ಗೌರವದ ಮಾತುಗಳನ್ನು ಆಡಿದ್ದೀರಿ. ರಾಜ್ಕುಮಾರ್, ಪುನೀತ್ ರಾಜ್ಕುಮಾರ್ ಅವರನ್ನು ನೆನಪಿಸಿಕೊಳ್ಳುತ್ತಿದ್ದೀರಿ. ಪುನೀತ್ ಅವರಿಗೆ ಮಾತು ಕೊಟ್ಟಿರುವುದು ಸುಳ್ಳ, ನಾಟಕನಾ?. ರಾಜ್ಕುಮಾರ್ ಅವರು ಇಂದು ಇಲ್ಲದಿರಬಹುದು, ಪುನೀತ್ ರಾಜ್ಕುಮಾರ್ ಇಲ್ಲದಿರಬಹುದು. ಆದರೆ ಅವರು ರಾಜ್ಯಕ್ಕೆ ಮಾಡಿದ ಸೇವೆ ಏನು ಎಂದು ಎಲ್ಲರಿಗೆ ಗೊತ್ತಿದೆ. ರೈತರು ಬದುಕಬೇಕು ಅಂತಾ ರಾಯಭಾರಿ ಆಗಿ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.
ನೀವು ಮುಖ್ಯಮಂತ್ರಿಯಾಗಿ ಇನ್ಮೊಂದು ತಿಂಗಳು ಇರುತ್ತಿರೋ, ಒಂದೂವರೆ ತಿಂಗಳು ಇರುತ್ತಿರೋ ಗೊತ್ತಿಲ್ಲ. ನಿಮ್ಮದು ಮುಗೀತು. ಯಾಕೆ ನಮ್ಮ ರೈತರಿಗೆ ಅವಮಾನ ಮಾಡುತ್ತೀದ್ದೀರಿ? ಅದಕ್ಕೆ ನಾನು ಪ್ರತಿಭಟನೆ ಮಾಡಲು ಬಂದಿಲ್ಲ. ನಾನು ಬೆಳಗ್ಗೆ ಹಾಲು ತಗೊಬೇಕಿತ್ತು. ಹಾಲು ತೆಗೆದುಕೊಂಡಿದ್ದೀನಿ, ಬಿಸ್ಕೆಟ್ ತೆಗೆದುಕೊಂಡಿದ್ದೀನಿ ಅಷ್ಟೇ ಎಂದು ಡಿ ಕೆ ಶಿವಕುಮಾರ್ ಕುಟುಕಿದರು.
ಅಮುಲ್ ಇರಲಿ. ಬೇರೆ ಬೇರೆ ಕಡೆ ಇದೆ. ಮೊದಲು ನಿಮ್ಮ ಮನೆಯ ರೈತರನ್ನು ಉಳಿಸಿಕೊಳ್ಳಿ. ನಷ್ಟವಾದರೂ ಕೂಡ ರೈತರು ನಂದಿನಿಗೆ ಹಾಲು ಹಾಕ್ತಿದ್ದಾರೆ. ಇಲ್ಲಿ ರೇವಣ್ಣ, ಅಲ್ಲಿ ಬಾಲಚಂದ್ರ ಜಾರಕಿಹೋಳಿ ಅಧ್ಯಕ್ಷರಾಗಿದ್ದಾರೆ. ಅಮುಲ್ಗಿಂತ ದೊಡ್ಡದು ನಾವು ಕನಕಪುರದಲ್ಲಿ ಮಾಡಿದ್ದೀವಿ. ರಾಜ್ಯದ, ರೈತರ ಆಸ್ತಿ ನಂದಿನಿ. ಇದನ್ನು ಉಳಿಸಬೇಕು, ಬೆಳೆಸಬೇಕು ಎಲ್ಲರೂ ಕೂಡ ಸಹಕಾರ ಕೊಡಿ ಎಂದು ಅವರು ಮನವಿ ಮಾಡಿದರು.
ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡದ ಬಗ್ಗೆ ಮಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಡಿ.ಕೆ ಶಿವಕುಮಾರ್ ಹಾಸನದಲ್ಲಿ ಕಾಂಗ್ರೆಸ್ 3ನೇ ಪಟ್ಟಿ ಬಗ್ಗೆ ಆಮೇಲೆ ಮಾತನಾಡುತ್ತೇನೆ. ಕೆಲ ದಿನಗಳಲ್ಲೇ ಪಟ್ಟಿ ಬಿಡುಗಡೆ ಮಾಡುವುದಾಗಿ ಅವರು ತಿಳಿಸಿದರು.
ಇದನ್ನೂ ಓದಿ:ನಂದಿನಿ ಹಾಲನ್ನೇ ಬಳಸಲು ನಿರ್ಧರಿಸಿದ ಬೆಂಗಳೂರು ಹೊಟೇಲ್ ಸಂಘ