ಹಾಸನ: ಜಿಲ್ಲೆಯ ಯಾವ ಭಾಗದಲ್ಲಾದರೂ ಅಪರಾಧ ಪ್ರಕರಣಗಳು ಸಂಭವಿಸುತ್ತಿರುವ ಬಗ್ಗೆ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಿದರೆ ಕೂಡಲೇ ನಾವು ಸಿದ್ಧರಿರುತ್ತೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಸಾರ್ವಜನಿಕರಿಗೆ ಭರವಸೆ ಕೊಟ್ಟಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದರು. ವಿವಿಧ ಭಾಗಗಳಲ್ಲಿ ರೌಡಿಗಳಿಂದ ನಡೆಯುವ ಘಟನೆಗಳಲ್ಲಿ ಆರೋಪಿಗಳ ಬಂಧನ ಕೆಲಸ ನಡೆಯುತ್ತಿದೆ. ಅಲ್ಲಲ್ಲಿ ಒಬ್ಬೊಬ್ಬರು ತಪ್ಪಿಸಿಕೊಂಡಿದ್ದು, ಅವರನ್ನು ಹಿಡಿಯಲು ಪೊಲೀಸ್ ತಂಡ ರಚನೆ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಬಾರ್‌ಗಳನ್ನು ರಾತ್ರಿ ಸಮಯದಲ್ಲಿ ಬೇಗ ಮುಚ್ಚಲು ಹಾಗೂ ಪರವಾನಗಿ ಇಲ್ಲದಂತಹ ಡಾಬಾಗಳನ್ನು ಪೂರ್ಣವಾಗಿ ಮುಚ್ಚಿಸುವ ಕೆಲಸ ಮಾಡಲಾಗುತ್ತಿದೆ. ಕೊಲೆ ಅರೋಪಿಗಳು ತಪ್ಪಿಸಿಕೊಂಡು ವಸತಿ ಗೃಹಗಳಂತಹ ಸ್ಥಳಗಳಲ್ಲಿ ಮಲಗಿಕೊಳ್ಳುವುದು ಸಾಮಾನ್ಯವಾಗಿದ್ದು, ಕೆಲ ಪ್ರಕರಣಗಳಲ್ಲಿ ನಾವೇ ಹೋಗಿ ಬಂಧಿಸಿದ ಉದಾಹರಣೆಗಳಿವೆ ಎಂದರು.
ಮಾಧ್ಯಮಗಳಿಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಕಳೆದ ಮೂರು ತಿಂಗಳಲ್ಲಿ ಮೂರು ಗಾಂಜಾ ಮಾರಾಟ ಪ್ರಕರಣಗಳನ್ನು ಪತ್ತೆ ಮಾಡಿದ್ದು ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದ್ದೇವೆ. ಇತರೆ ಎರಡು ಪ್ರಕರಣವನ್ನು ಬೇಧಿಸುವಲ್ಲಿಯೂ ಯಶಸ್ವಿಯಾಗಿದ್ದೇವೆ. ಕೆಲ ಪ್ರಕರಣ ತಡವಾಗಿ ಬಗೆಹರಿದಿವೆ. ಬಾಕಿ ಪ್ರಕರಣಗಳ ಆರೋಪಿಗಳನ್ನು ಶೀಘ್ರದಲ್ಲೇ ಪತ್ತೆ ಹಚ್ಚಲಾಗುವುದು ಎಂದು ತಿಳಿಸಿದರು.
ಲಾಕ್‌ಡೌನ್ ಅವಧಿಯಲ್ಲಿ ಮುಂಬೈ, ಬೆಂಗಳೂರಿನಿಂದ ಚನ್ನರಾಯಪಟ್ಟಣ ತಾಲ್ಲೂಕಿನ ಹಳ್ಳಿಗಳಿಗೆ ಸಾಕಷ್ಟು ಜನರು ವಾಪಸ್ ಬಂದಿದ್ದಾರೆ. ಬಹುತೇಕರಿಗೆ ಉದ್ಯೋಗವಿಲ್ಲದೆ ದಿನದೂಡುವುದು ಕಷ್ಟವಾಗಿದೆ. ಅವರು ಸ್ನೇಹಿತರ ಜತೆ ಸೇರಿ ಪಾರ್ಟಿ ಮಾಡುತ್ತಾರೆ. ಕುಡಿದ ಮತ್ತಿನಲ್ಲಿ ಗಲಾಟೆ, ಕೊಲೆ ನಡೆದಿದೆ. ಹಾಗಾಗಿ ಚನ್ನರಾಯಪಟ್ಟಣದ ಎರಡು ಪ್ರಕರಣಗಳಲ್ಲಿ 35 ಜನರನ್ನು ಬಂಧಿಸಲಾಗಿದೆ.
ಚನ್ನರಾಯಪಟ್ಟಣಕ್ಕೆ ವಾರದಲ್ಲಿ ಮೂರು ಬಾರಿ ಭೇಟಿ ನೀಡುತ್ತಿದ್ದೇನೆ. ಅಲ್ಲಿ ಪೊಲೀಸ್ ಗಸ್ತು ಹೆಚ್ಚಿಸಲಾಗಿದೆ. ಕುಖ್ಯಾತ ರೌಡಿಯೊಬ್ಬ ನಾಪತ್ತೆಯಾಗಿದ್ದು, ಆತನ ಪತ್ತೆಗೆ ಬಲೆ ಬೀಸಲಾಗಿದೆ. ಚನ್ನರಾಯಪಟ್ಟಣ ತಾಲ್ಲೂಕಿನ ಬೇಡಿಗನಹಳ್ಳಿ ಯುವಕನ ಹತ್ಯೆ ಪ್ರಕರಣದ ತನಿಖೆ ನಡೆಯುತ್ತಿದ್ದು, ಮೃತನ ತಾಯಿ ತನ್ನ ಪತಿ ವಿರುದ್ಧ ದೂರು ನೀಡಿದ್ದಾರೆ ಎಂದರು.