ಹಾಸನ: ಲೋಕಸಭಾ ಚುನಾವಣೆ ದಿನಾಂಕ ಪ್ರಕಟವಾಗುತ್ತಿದ್ದಂತೆ ಜೆಡಿಎಸ್ ಭದ್ರಕೋಟೆ ಹಾಸನದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರುತ್ತಿದೆ. ಜೆಡಿಎಸ್ ವಲಯದಲ್ಲಿ ಈಗಾಗಲೇ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಂಡಿದ್ದರೆ, ಅದನ್ನು ವಿರೋಧಿಸಿ ಕಾಂಗ್ರೆಸ್ನ ಕೆಲ ಕಾರ್ಯಕರ್ತರು ಪಕ್ಷ ಬದಲಿಸುವ ನಿರ್ಧಾರ ಕೂಡ ಕೈಗೊಂಡಿದ್ದಾರೆ.
ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಬಗ್ಗೆ ಭಾರಿ ಲೆಕ್ಕಾಚಾರ ನಡೆಯುತ್ತಿದ್ದು, ಜೆಡಿಎಸ್ ವಲಯದಲ್ಲಿ ದೇವೇಗೌಡರ ಮೊಮ್ಮಗನಿಗೆ ಕ್ಷೇತ್ರವನ್ನು ತ್ಯಾಗ ಮಾಡಲು ಮುಂದಾಗಿದ್ದಾರೆ. ಆರು ಬಾರಿ ಸ್ಪರ್ಧಿಸಿದ್ದ ದೇವೇಗೌಡ್ರು ಈ ಬಾರಿಯೂ ಕೂಡ ಚುನಾವಣೆಯಲ್ಲಿ ಸ್ಪರ್ಧಿಸಲಿ ಎನ್ನುವುದು ನನ್ನ ಅಭಿಲಾಷೆ ಎಂದು ಮೊನ್ನೆ ಮೊನ್ನೆ ತಾನೆ ಜಿಲ್ಲಾ ಉಸ್ತುವಾರಿ ಸಚಿವರ ಪತ್ನಿ ಭವಾನಿ ರೇವಣ್ಣ ಕೂಡ ಬೇಲೂರಿನಲ್ಲಿ ಮಾತನಾಡಿದ್ದರು.
ಬೇರೆಯವರ ಹೆಗಲು ಇದು, ಎಷ್ಟು ದಿನ ಅಂತ ದೆಹಲಿಗೆ ಹೋಗಲಿ...
ದೇವೇಗೌಡರು, ನಾನು ಎಷ್ಟು ದಿನ ಅಂತ ಬೇರೆಯವರ ಹೆಗಲನ್ನು ಹಿಡಿದು ಲೋಕಸಭೆಗೆ ಹೋಗಲಿ. ನನಗೂ ವಯಸ್ಸಾಯಿತು ಅಲ್ಲವೇ..? ಮೊಮ್ಮಗ ಕೂಡ ರಾಜಕೀಯದಲ್ಲಿ ಸಾಕಷ್ಟು ಅನುಭವ ಪಡೆಯುತ್ತಿದ್ದಾನೆ ಎನ್ನುವ ಮೂಲಕ ಜೆಡಿಎಸ್ ಸಮಾವೇಶದಲ್ಲಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರದ ಶಾಸಕರಿಂದ ಪ್ರಜ್ವಲ್ ರೇವಣ್ಣನನ್ನ ನೀವು ಅಭ್ಯರ್ಥಿ ಮಾಡಿ. ನಾವು ಗೆಲ್ಲಿಸಿ ಲೋಕಸಭೆಗೆ ಕಳುಹಿಸುತ್ತೇವೆ ಎಂಬ ಮಾತುಗಳನ್ನಾಡಿಸಿದ್ರು.
ಮೈತ್ರಿ ಧರ್ಮ ಅಂತ ಮೊಮ್ಮಕ್ಕಳನ್ನು ತರುವುದಾದರೆ ನಮ್ಮ ಸಮ್ಮತಿ ಇಲ್ಲ
ಆದರೆ ಜೆಡಿಎಸ್ನವರು ವಚನ ಕೊಟ್ರೆ ಸಾಕೇ. ಕಾಂಗ್ರೆಸ್ ಕೂಡ ಇದಕ್ಕೆ ಸಮ್ಮತಿ ಸೂಚಿಸಬೇಕು. ಯಾಕಂದ್ರೆ ಇದು ಮೈತ್ರಿ ಸರ್ಕಾರ. ಆದರೆ ಕೆಲವರಿಗೆ ಮೈತ್ರಿ ಸರ್ಕಾರದ ಕೆಲವು ನಿರ್ಣಯಗಳನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮಾಜಿ ಸಚಿವ ಎ.ಮಂಜು, ಮಾಜಿ ಪ್ರಧಾನಿ ದೇವೇಗೌಡರು ಸ್ಪರ್ಧೆ ಮಾಡಿದರೆ ನಮ್ಮ ಪಕ್ಷದಿಂದ ಒಮ್ಮತವಿದೆ. ಅದನ್ನು ಬಿಟ್ಟು ಮೈತ್ರಿ ಸರ್ಕಾರ ಎಂಬ ಕಾರಣಕ್ಕೆ ಮೊಮ್ಮಕ್ಕಳನ್ನ ಚುನಾವಣೆಯಲ್ಲಿ ಗೆಲ್ಲಿಸುವುದಾದರೆ ನಮ್ಮ ಸಹಮತವಿಲ್ಲ ಎಂದು ಮೊದಲಿನಿಂದಲೂ ಕೂಡ ವಿರೋಧಿಸುತ್ತಲೇ ಬಂದಿದ್ದಾರೆ. ಈಗಲೂ ವಿರೋಧಿಸುತ್ತಿದ್ದಾರೆ.
ಈ ನಡುವೆ ಕಾಂಗ್ರೆಸ್ನ ಮತ್ತೊಬ್ಬ ಮಾಜಿ ಸಚಿವ ಬಿ.ಶಿವರಾಂ ಕೂಡ, ನಾವು ಅಪ್ಪಟ ಜೆಡಿಎಸ್ ವಿರೋಧಿಗಳು. ಹೈಕಮಾಂಡ್ ನಿರ್ಧಾರದಂತೆ ಚುನಾವಣೆಯಲ್ಲಿ ನಾವು ಕೆಲಸ ಮಾಡುತ್ತೇವೆ. ಆದರೆ ಮೊಮ್ಮಕ್ಕಳನ್ನು ಚುನಾವಣೆಯಲ್ಲಿ ನಿಲ್ಲಿಸಿದರೆ, ಅದನ್ನು ಒಪ್ಪಿಕೊಳ್ಳುವ ಮನಸ್ಥಿತಿ ನನಗೂ ಇಲ್ಲ. ನಮ್ಮ ಕಾರ್ಯಕರ್ತರಿಗೂ ಇಲ್ಲ ಎಂದು ನೇರವಾಗಿಯೇ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ರು.
ಎ.ಮಂಜು ಸೆಳೆಯಲು ಬಿಜೆಪಿ ಪ್ರೀತಂಗೌಡರ ನಾನಾ ಕಸರತ್ತು...
ಇವೆಲ್ಲದರ ನಡುವೆ ಹಾಸನದ ಬಿಜೆಪಿ ಶಾಸಕ ಪ್ರೀತಂಗೌಡ, ಎ.ಮಂಜುರನ್ನ ಬಿಜೆಪಿಗೆ ಸೆಳೆಯುವ ಕಸರತ್ತು ನಡೆಸುತ್ತಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಈ ಬಾರಿ ಮೈತ್ರಿ ಅಭ್ಯರ್ಥಿಯನ್ನಾಗಿ ಪ್ರಜ್ವಲ್ ರೇವಣ್ಣರನ್ನ ನಿಲ್ಲಿಸುವುದು ಬಹುತೇಕ ಖಚಿತವಾಗಿರುವುದರಿಂದ ಕಾಂಗ್ರೆಸ್ ಪಕ್ಷದ ಎ.ಮಂಜು ಎದುರಾಳಿಯಾಗಿ ನಿಲ್ಲಲು ಸಮರ್ಥ ಅಭ್ಯರ್ಥಿ ಎಂದು ಬಿಜೆಪಿಗೆ ತಿಳಿದಿದೆ. ಹೀಗಾಗಿ ಬಿಜೆಪಿ ನಾಯಕರು ಮಂಜುರನ್ನ ಪಕ್ಷಕ್ಕೆ ಹೇಗಾದರೂ ಮಾಡಿ ಕರೆತರಲೇಬೇಕೆಂದು ಹಲವು ಬಿಜೆಪಿ ನಾಯಕರ ಜೊತೆ ಮಾತುಕತೆ ಕೂಡ ನಡೆಸಿದ್ದಾರೆ ಎನ್ನಲಾಗಿದೆ.
ಪ್ರಜ್ವಲ್ ನಿಂತ್ರೆ ಬಿಜೆಪಿಗೆ ಹೋಗ್ತೀನಿ...
ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಬಹಿರಂಗವಾಗಿಯೇ ನಾನು ಬಿಜೆಪಿಯವರೊಂದಿಗೆ ಮಾತನಾಡಿದ್ದೇನೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷದವರಿಗೆ ಮಂಜು ಶಾಕ್ ಕೊಟ್ಟಿದ್ದಾರೆ. ದೇವೇಗೌಡರನ್ನು ಬಿಟ್ಟು ಪ್ರಜ್ವಲ್ ನಿಂತರೆ, ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ತಳಮಟ್ಟಕ್ಕೆ ಹೋಗುತ್ತದೆ. ಹೀಗಾಗಿ ಪಕ್ಷ ಸಂಘಟನೆ ಮಾಡುವುದು ತುಂಬಾ ಕಷ್ಟವಾಗುತ್ತದೆ ಎಂಬುದನ್ನು ಅರಿತ ಎ.ಮಂಜು, ಪಕ್ಷ ತೊರೆದು ಬಿಜೆಪಿಗೆ ಹೋಗುವ ಪ್ಲಾನ್ ಕೂಡ ಮಾಡಿದ್ದಾರೆ.
ಇನ್ನು ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೂಡ ಎ.ಮಂಜು ದೇವೇಗೌಡರಿಗೆ ಪ್ರಬಲ ಪ್ರತಿಸ್ಪರ್ಧಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ದೇವೇಗೌಡರ ಗೆಲುವಿನ ಅಂತರವನ್ನು ಒಂದು ಲಕ್ಷಕ್ಕಿಳಿಸಿ ಪರಭಾವಗೊಂಡಿದ್ದರು. ಈ ಬಾರಿ ಕುಟುಂಬ ರಾಜಕಾರಣದ ವಿಷಯವನ್ನು ಆಧಾರವಾಗಿಟ್ಟುಕೊಂಡು ಬಿಜೆಪಿಗೆ ಹೋಗಿ ಸಂಸದರಾಗುವ ಪಣ ತೊಟ್ಟಿರುವುದು ಅಷ್ಟೇ ಸತ್ಯ. ಆದರೆ ಎ.ಮಂಜುರವರ ಮುಂದಿನ ದಾರಿ ಏನೆಂಬುದು ಒಂದೆರಡು ದಿನಗಳಲ್ಲಿ ಗೊತ್ತಾಗಲಿದ್ದು, ಅಲ್ಲಿಯತನಕ ಕಾದು ನೋಡಬೇಕಿದೆ.