ಚನ್ನರಾಯಪಟ್ಟಣ(ಹಾಸನ): ನಿಗಮ ಮಂಡಳಿ ಸ್ಥಾನ ಬೇಡ ಅಂತಾ ಯಾವ ಶಾಸಕರೂ ರಿಜೆಕ್ಟ್ ಮಾಡಿಲ್ಲ. ಆದರೆ, ಕಾರ್ಯಕರ್ತರಿಗೆ ಅವಕಾಶ ಕೊಡಿ ಎಂದು ಹೇಳಿದ್ದಾರೆ. ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ ಎಂದು ಶ್ರವಣಬೆಳಗೊಳದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಮಾಧ್ಯಮದೊಂದಿಗೆ ಮಾತನಾಡಿದ ನಳಿನ್ ಕುಮಾರ್ ಕಟೀಲ್ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಬಳಿಕ ಮಾತನಾಡಿದ ಅವರು, ನಮ್ಮ ರಾಜ್ಯದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ, ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆಗೆ ಅವಕಾಶಗಳೇ ಇಲ್ಲ. ಇದು ಕೇವಲ ಮಾಧ್ಯಮಗಳ ಚರ್ಚೆ ಎಂದರು.
ಮಾಧ್ಯಮಗಳ ಪ್ರಶ್ನೆಗೆ ಗರಂ ಆದ ರಾಜ್ಯಾಧ್ಯಕ್ಷರು, ಎಲ್ಲಿ ಹೇಳಿದ್ದಾರೆ, ಯಾರು ಹೇಳಿದ್ದಾರೆ, ಯಾವ ಶಾಸಕ ಹೇಳಿದ್ದಾರೆ ತೋರಿಸಿ. ಯಾರು ಸಿಎಂ ಆಗಬೇಕೆಂದು ಬರೆದುಕೊಟ್ಟಿದ್ದಾರೆ ತೋರಿಸಿ. ಒಂದೋ ಶಾಸಕರು ಹೇಳಬೇಕು, ಇಲ್ಲ ಯಾರಾದ್ರೂ ಮಂತ್ರಿ ಹೇಳಿದ್ದಾರಾ? ರಾಜ್ಯಾಧ್ಯಕ್ಷನಾಗಿ ನಾನು ಹೇಳಿದ್ದೇನಾ? ಇಲ್ಲ, ಇದು ಕಪೋಲ ಕಲ್ಪಿತ ಒಂದು ವಿಚಾರ ಎಂದರು.
ಸಿಎಂ ಬದಲಾವಣೆಯ ಯಾವುದೇ ಚರ್ಚೆ ಇಲ್ಲವೇ ಇಲ್ಲ. ಇನ್ನೂ ಮೂರು ವರ್ಷ ರಾಜ್ಯದ ಸಿಎಂ ಯಡಿಯೂರಪ್ಪನವರೇ.. ಈ ಅವಧಿಯನ್ನ ಬಿಜೆಪಿ ಪೂರೈಸುತ್ತೆ, ಸಿಎಂ ಬದಲಾವಣೆಯೂ ಇಲ್ಲ. ಯಾವುದೇ ಪಾರ್ಟಿಗೂ ಸಿಎಂ ಬದಲಾವಣೆ ಮಾಡೋ ಶಕ್ತಿಯೂ ಇಲ್ಲ. ಸಿದ್ದರಾಮಯ್ಯ ಹೇಳಿದ್ರೆ, ಡಿಕೆಶಿ ಹೇಳಿದ್ರೆ ನಾವು ಸಿಎಂ ಚೇಂಚ್ ಮಾಡ್ತೀವಾ ಎಂದು ವ್ಯಂಗ್ಯವಾಡಿದರು. ನಮ್ಮ ಸರ್ಕಾರ ಗಟ್ಟಿ ಇದೆ, ಸಿಎಂ ಒಳ್ಳೆ ಕೆಲಸ ಮಾಡುತ್ತಿದ್ದಾರೆ. ಜನರೂ ಖುಷಿಯಾಗಿದ್ದಾರೆ ಎಂದು ತಿಳಿಸಿದರು.