ಹಾಸನ: ಆಕಸ್ಮಿಕ ಬೆಂಕಿ ತಗುಲಿ ಹಸು ಹಾಗೂ ಕರುವಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ. ತಾಲ್ಲೂಕಿನ ಡೈರಿ ಶೆಟ್ಟಿಹಳ್ಳಿ ಗ್ರಾಮದ ಹಸುವಿನ ಮಾಲೀಕ ದೇವರಾಜೇಗೌಡರ ಮನೆಯಲ್ಲಿ ಇಂತಹುದೊಂದು ಪ್ರಕರಣ ಜರುಗಿದ್ದು, ಹಸು ಮತ್ತು ಕರು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿವೆ.
ಆಕಸ್ಮಿಕ ಬೆಂಕಿ ತಗುಲಿ ಹಸು-ಕರುವಿಗೆ ಗಂಭೀರ ಗಾಯ ಕಳೆದ ಮೂರ್ನಾಲ್ಕು ದಿನಗಳಿಂದ ಹಾಸನ ಜಿಲ್ಲೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗಿ ಈಗಾಗಲೇ ಸುಮಾರು 20ಕ್ಕೂ ಹೆಚ್ಚು ಕಡೆಗಳಲ್ಲಿ ಬೆಂಕಿ ಅನಾಹುತಗಳು ಸಂಭವಿಸಿವೆ. ಇಂದು ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ ಬಿಸಿಲಿನ ತಾಪಕ್ಕೆ ತೆಂಗಿನಗರಿಯ ಮೂಲಕ ನಿರ್ಮಾಣ ಮಾಡಿದ್ದ ದನಗಳ ಕೊಟ್ಟಿಗೆಯ ಮೇಲ್ಛಾವಣಿ ಸುಟ್ಟುಹೋಗಿದ್ದು ಕೊಟ್ಟಿಗೆಯಲ್ಲಿದ್ದ ಹಸು ಮತ್ತು ಕರುವಿಗೆ ಗಂಭೀರ ಗಾಯಗಳಾಗಿವೆ.
ಗಾಯಗೊಂಡ ಜಾನುವಾರುಗಳಿಗೆ ಪಶು ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡುತ್ತಿದ್ದು, ಶೆಟ್ಟಿಹಳ್ಳಿ ಗ್ರಾಮದ ಅಗ್ನಿ ಸಂಭವಿಸಿದ ಸ್ಥಳಕ್ಕೆ ಶ್ರವಣಬೆಳಗೊಳ ಶಾಸಕ ಸಿ.ಎಸ್.ಬಾಲಕೃಷ್ಣ ಕೂಡ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಬೇಸಿಗೆಯಲ್ಲಿ ಬೆಂಕಿಯ ಅವಘಡಗಳು ಹೆಚ್ಚಾಗಿ ಸಂಭವಿಸುವುದರಿಂದ ಗುಡಿಸಲು, ಕೊಟ್ಟಿಗೆಯಲ್ಲಿ ಬೆಂಕಿ ಹೊತ್ತಿಕೊಳ್ಳದಂತೆ ಹಳ್ಳಿಯಲ್ಲಿನ ರೈತರು ಜಾಗರೂಕರಾಗಿರಬೇಕು ಎಂದರು.
ಇದರ ಜೊತೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಚೆಸ್ಕಾಂ ಇಲಾಖೆಯ ಅಧಿಕಾರಿಗಳು, ಲೈನ್ಮೆನ್ ಕೂಡ ಗ್ರಾಮಗಳಿಗೆ ತೆರಳಿ ಇಂತಹ ಬೆಂಕಿ ಅವಘಡಗಳು ತಪ್ಪಿಸಲು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗುವುದನ್ನು ತಪ್ಪಿಸಲು ರೈತರಿಗೆ ಮಾಹಿತಿ ಜೊತೆಗೆ ವಿದ್ಯುತ್ ತಂತಿಗಳಿಗೆ ಅಡಚಣೆಯಾಗುವುದನ್ನು ತಪ್ಪಿಸಲು ಮರದ ಕೊಂಬೆಗಳು ತೆಂಗಿನಗರಿಗಳನ್ನು ತೆಗೆಯಲು ಸೂಚಿಸಿದರು.
ಅಲ್ಲದೇ ಆಕಸ್ಮಿಕ ಬೆಂಕಿಗೆ ಗಂಭೀರವಾಗಿ ಗಾಯಗೊಂಡಿರುವ ಹಸು ಮತ್ತು ಕರುವಿಗೆ ಸೂಕ್ತ ಚಿಕಿತ್ಸೆ ಹಾಗೂ ಸುಟ್ಟು ಹೋದಂತಹ ಕೊಟ್ಟಿಗೆಗೆ ಸರ್ಕಾರದಿಂದ ಬರಬಹುದಾದಂತಹ ಪರಿಹಾರವನ್ನು ಕೊಡಿಸುವುದಾಗಿ ಹಾಗೂ ವೈಯಕ್ತಿಕವಾಗಿ ಸಹಾಯ ಮಾಡುವ ಭರವಸೆ ನೀಡಿದರು.