ಹಾಸನ: ಜಿಲ್ಲೆಯ ಪೊಲೀಸ್ ಇನ್ಸ್‌ಪೆಕ್ಟರ್ ಹೆಚ್. ಎನ್ ಬಾಲಕೃಷ್ಣ ಅವರ ಸಂಬಂಧಿಕರ ಮನೆಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದಾರೆ.
ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಬಾಲಕೃಷ್ಣ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯಾದ್ಯಂತ ನಡೆಯುತ್ತಿರುವ ದಾಳಿಯ ಭಾಗವಾಗಿ ಹೊಳೆನರಸೀಪುರ-ಚನ್ನರಾಯಪಟ್ಟಣ ರಸ್ತೆಯಲ್ಲಿರುವ ಮಾವ ಕೋಟೆ ಚಂದ್ರೇಗೌಡ ಎಂಬುವರ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಮೈಸೂರಿನ ವೃತ್ತ ನಿರೀಕ್ಷಕ ಹೆಚ್. ಎನ್ ಬಾಲಕೃಷ್ಣ ಮಾವನ ಮನೆಯ ಮೇಲೆ ಎಸಿಬಿ ಅಧಿಕಾರಿಗಳ ದಾಳಿ ಚನ್ನರಾಯಪಟ್ಟಣ ಪಟ್ಟಣದ ಎರಡು ಸ್ಥಳಗಳಲ್ಲಿ ಅವರ ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಇದು ಬಾಲಕೃಷ್ಣ ಅವರ ಮಾವ ಮತ್ತು ಕಾಂಗ್ರೆಸ್ ಮುಖಂಡ ಚಂದ್ರೇಗೌಡ ಅವರ ಮನೆಯಾಗಿದೆ. ಹಾಸನ ಮತ್ತು ಮಂಡ್ಯದಿಂದ ಬಂದಿರುವ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗ್ತಿದೆ.
ಇತ್ತೀಚೆಗಷ್ಟೇ ಬಾಲಕೃಷ್ಣ ಕೋಟಿ ಮೌಲ್ಯದ ಆಸ್ತಿಯನ್ನು ಖರೀದಿಸಿದ್ದರು. ಮದುವೆಯ ಸಂದರ್ಭದಲ್ಲಿ ಚಂದ್ರೇಗೌಡ ಅವರು ಬಾಲಕೃಷ್ಣ ಪತ್ನಿ ಹೆಸರಿಗೆ ಸುಮಾರು 20ಕ್ಕೂ ಹೆಚ್ಚು ಮನೆಗಳನ್ನು ಉಡುಗೊರೆಯಾಗಿ ಕೊಟ್ಟಿದ್ದರು ಎಂದು ಹೇಳಲಾಗ್ತಿದೆ.
ವೃತ್ತ ನಿರೀಕ್ಷಕ ಹೆಚ್. ಎನ್ ಬಾಲಕೃಷ್ಣ ಚನ್ನರಾಯಪಟ್ಟಣದ ಶ್ರವಣಬೆಳಗೊಳ ರಸ್ತೆಯ ಜನಿವಾರ ಸಮೀಪ ಹೆಚ್. ಎನ್ ಬಾಲಕೃಷ್ಣ ಕೋಟಿ ವೆಚ್ಚದಲ್ಲಿ ಜಮೀನು ಖರೀದಿಸಿದ್ದರು. ಈ ಹಿಂದೆ ಭಾರತೀಯ ಜೀವವಿಮಾ ನಿಗಮದ ಪ್ರತಿನಿಧಿಯಾಗಿ ಅವರು ಕೆಲಸ ನಿರ್ವಹಿಸಿದ್ದರು. ಜಮೀನು ಮುಳುಗಡೆ ಕೋಟಾದ ಅಡಿಯಲ್ಲಿ ಬಾಲಕೃಷ್ಣ ಸಬ್ ಇನ್ಸ್‌ಪೆಕ್ಟರ್ ಆಗಿ ಕೆಲಸಕ್ಕೆ ಸೇರಿದ್ದು, ಇತ್ತೀಚಿಗಷ್ಟೇ ವೃತ್ತ ನಿರೀಕ್ಷಕರಾಗಿ ಮುಂಬಡ್ತಿ ಪಡೆದಿದ್ದರು.
ಕೋಟೆ ಚಂದ್ರೇಗೌಡ ಕಾಂಗ್ರೆಸ್ ಮುಖಂಡ ಜೊತೆಗೆ ರಿಯಲ್ ಎಸ್ಟೇಟ್ ನಡೆಸುತ್ತಿದ್ದು, ಚನ್ನರಾಯಪಟ್ಟಣ ಒಂದರಲ್ಲಿಯೇ ಸುಮಾರು 70ಕ್ಕೂ ಹೆಚ್ಚು ಸ್ವಂತ ಮನೆಗಳನ್ನು ಹೊಂದಿದ್ದಾರೆ ಎನ್ನಲಾಗ್ತಿದೆ. ಬೆಳಗ್ಗೆಯಿಂದಲೇ ಹೊಳೆನರಸೀಪುರ ಬೃಹತ್ ಬಂಗಲೆಯಲ್ಲಿ ಎಸಿಬಿ ಅಧಿಕಾರಿಗಳು ಬೀಡುಬಿಟ್ಟಿದ್ದು, ಪ್ರಮುಖ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಓದಿ:ಕಾಡು ಹಂದಿಗೆ ಡಿಕ್ಕಿ ಹೊಡೆದ ಕಾರು ; ಮೂವರು ಸ್ಥಳದಲ್ಲೇ ಸಾವು, ಹಲವರ ಸ್ಥಿತಿ ಗಂಭೀರ