ಹಾಸನ: ಮಂಜುನಾಥ್ ವೃತ್ತಿಯಲ್ಲಿ ವಕೀಲರಾಗಿದ್ದು, ಪ್ರವೃತ್ತಿಯಲ್ಲಿ ಯೋಗಪಟುವಾಗಿದ್ದಾರೆ. ಇವರು ಕಳೆದ ಒಂದೂವರೆ ವರ್ಷದಿಂದ ಈ ಒಂದು ಸರ್ವಾಂಗಾಸನವನ್ನು ಮಾಡಲು ಪ್ರಯತ್ನಿಸಿದ್ದು, ಕೊನೆಗೂ ಛಲಬಿಡದೆ ಅದ್ಭುತ ಸಾಧನೆಗೈದಿದ್ದಾರೆ. 30 ಸೆಕೆಂಡ್ನಿಂದ ಮೂರು ನಿಮಿಷಗಳ ತನಕ ನೀರಿನಲ್ಲಿಯೇ ಉಸಿರನ್ನ ಬಿಗಿದಿಟ್ಟುಕೊಂಡು ಸರ್ವಾಂಗಾಸನ ಮೂಲಕ ಎಲ್ಲರೂ ಬೆರಗಾಗುವಂತೆ ಮಾಡಿದ್ದಾರೆ. ಅಷ್ಟೇ ಅಲ್ಲದೇ, ಕಾಲುಗಳಿಂದ ಬಾಣವನ್ನು ಸಹ ಬಿಡುತ್ತಾರೆ.
ಮಂಜುನಾಥ್ ಹಾಸನ ಜಿಲ್ಲೆಯ ಹೊಳೆನರಸಿಪುರ ತಾಲೂಕಿನ ಹಳ್ಳಿ ಮೈಸೂರಿನವರು. ಈ ಒಂದು ಸರ್ವಾಂಗಾಸನವನ್ನು ಅವರು ಪ್ರತಿನಿತ್ಯ ಆರು ಗಂಟೆಗೆ ಎದ್ದು ರಾಮನಾಥಪುರದ ಕಾವೇರಿ ನದಿಯ ಜಪದ ಕಟ್ಟೆಯ ಬಳಿ ಅಭ್ಯಾಸ ಮಾಡುತ್ತಿದ್ದರು. ಎಂಟನೇ ವಿಶ್ವ ಯೋಗ ದಿನದ ಅಂಗವಾಗಿ ಮತ್ತು ನರೇಂದ್ರ ಮೋದಿ ಅವರ ಕರ್ನಾಟಕ ಪ್ರವಾಸದ ಹಿನ್ನೆಲೆ ಇಂದು ಸರ್ವಾಂಗಾಸನ ಮಾಡುವ ಮೂಲಕ ಹೊಸದೊಂದು ಮುನ್ನುಡಿ ಬರೆದಿದ್ದಾರೆ. ಈ ಯೋಗಾಸನವನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಅರ್ಪಣೆ ಮಾಡುತ್ತೇನೆ ಎಂದು ಅವರು ಹೇಳುತ್ತಾರೆ.