ಆಲೂರು (ಹಾಸನ): ಸಹಾಯ ಮಾಡುವ ನೆಪದಲ್ಲಿ ವ್ಯಕ್ತಿಯೊಬ್ಬರಿಂದ ಎಟಿಎಂ ಕಾರ್ಡ್ ಬದಲಿಸಿ 85 ಸಾವಿರ ರೂ. ಹಣ ವಂಚಿಸಿರುವ ಘಟನೆ ಆಲೂರು ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.
ಆಲೂರು ತಾಲೂಕಿನ ಭೈರಾಪುರ ಗ್ರಾಮದ ತಿಮ್ಮಯ್ಯ ಎಂಬುವವರು ಇದೇ ತಿಂಗಳು 12ರ ಬೆಳಗ್ಗೆ ಪಟ್ಟಣದ ಬಸ್ ನಿಲ್ದಾಣದಲ್ಲಿರುವ ಕರ್ನಾಟಕ ಬ್ಯಾಂಕ್ ಎಟಿಎಂ ನಲ್ಲಿ ಹಣ ಡ್ರಾ ಮಾಡಲು ತೆರಳಿದ್ದಾರೆ. ಡ್ರಾ ಮಾಡಲು ಬಾರದ ಹಿನ್ನೆಲೆಯಲ್ಲಿ ಪಕ್ಕದಲ್ಲಿ ಇದ್ದಂತಹ ವ್ಯಕ್ತಿಯ ಬಳಿ ಸಹಾಯ ಕೇಳಿದ್ದಾರೆ. ಆ ಚಾಲಾಕಿ ತಿಮ್ಮಯ್ಯನಿಗೆ 5ಸಾವಿರ ರೂ ಹಣ ತೆಗೆದುಕೊಟ್ಟು ಹಣವನ್ನ ಲೆಕ್ಕ ಹಾಕುವಂತೆ ಹೇಳಿದ್ದಾನೆ.
ಹಣವನ್ನು ಎಣಿಸುತ್ತಿದ್ದ ಸಂದರ್ಭದಲ್ಲಿ ತಕ್ಷಣವೇ ತನ್ನಲ್ಲಿದ್ದಂತಹ ಕರ್ನಾಟಕ ಬ್ಯಾಂಕಿನ ಮತ್ತೊಂದು ಎಟಿಎಂ ಅನ್ನು ಅವರಿಗೆ ಕೊಟ್ಟು ಆತ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಇದರ ಬಗ್ಗೆ ಏನು ಅರಿಯದ ತಿಮ್ಮಯ್ಯ, ಹಣ ಮತ್ತು ಎಟಿಎಂ ಜೊತೆ ಮನೆಗೆ ತೆರಳಿದ್ದಾರೆ. ನಿನ್ನೆ ಮತ್ತಷ್ಟು ಹಣವನ್ನು ತೆಗೆಯಲು ಎಟಿಎಂಗೆ ತೆರಳಿದಾಗ ಹಣ ಇಲ್ಲದೇ ಇರುವುದನ್ನು ತಿಳಿದು ತೀವ್ರ ಕಂಗಾಲಾಗಿದ್ದಾರೆ.
ತಕ್ಷಣವೇ ಬ್ಯಾಂಕಿಗೆ ತೆರಳಿ, ಅಲ್ಲಿಯ ಅಧಿಕಾರಿಗಳೊಂದಿಗೆ ತನ್ನ ಖಾತೆಯಲ್ಲಿ ಹಣ ಇಲ್ಲದೇ ಇರುವ ಬಗ್ಗೆ ಮಾಹಿತಿ ಕೇಳಿದ್ದಾರೆ. ಈಗಾಗಲೇ ನಿಮ್ಮ 85, 000 ಹಣವನ್ನು ಡ್ರಾ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದೇ ತಡ ತಿಮ್ಮಯ್ಯರಿಗೆ ದಿಕ್ಕೇ ತೋಚದಂತಾಗಿದೆ. ಇದಾದ ನಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.