ಗದಗ:ನಗರದ ಜಿಮ್ಸ್ನ ಕೋವಿಡ್ ಲ್ಯಾಬ್‌ನಲ್ಲಿ ಮೊದಲ ಗಂಟಲು ದ್ರವ ಮಾದರಿಯ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ ಎಂದು ಜಿಮ್ಸ್ ನಿರ್ದೇಶಕ ಡಾ.ಪಿ.ಎಸ್. ಭೂಸರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಮ್ಸ್ ಕೋವಿಡ್ ಲ್ಯಾಬ್‌ನಲ್ಲಿ ಮೊದಲ ಗಂಟಲು ದ್ರವ ಮಾದರಿ ಪರೀಕ್ಷೆ ಯಶಸ್ವಿ: ಭೂಸರೆಡ್ಡಿ
ಗದಗ ಜಿಲ್ಲೆಯಲ್ಲಿ ಮೊದಲ ಗಂಟಲು ದ್ರವ ಮಾದರಿಯ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ ಎಂದು ಜಿಮ್ಸ್ ನಿರ್ದೇಶಕ ಡಾ.ಪಿ.ಎಸ್.ಭೂಸರೆಡ್ಡಿ ತಿಳಿಸಿದ್ದಾರೆ.
ಇದರ ಬಗ್ಗೆ ಮಾತನಾಡಿದ ಅವರು, ಕೋವಿಡ್-19 ಟ್ರೂನಾಟ್ ಪಿಸಿಆರ್ ಯಂತ್ರದ ಮೇಲೆ ಪರೀಕ್ಷೆ ನಡೆಸಿದ ರಾಜ್ಯದ ಮೊದಲ ಸಂಸ್ಥೆ ಮತ್ತು ಈ ಪರೀಕ್ಷೆಗೆ ಐಸಿಎಂಆರ್‌ನಿಂದ ಅನುಮತಿ ಪಡೆದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೆ ಜಿಮ್ಸ್ ಆಸ್ಪತ್ರೆ ಪಾತ್ರವಾಗಿದ್ದು, ಬೆಂಗಳೂರಿನಲ್ಲಿ ಇರುವ ಇದೇ ಮಾದರಿಯ ಬೃಹತ್ ಯಂತ್ರ ದಿನಕ್ಕೆ 96 ಟೆಸ್ಟ್ ಫಲಿತಾಂಶಗಳನ್ನು ಒದಗಿಸಿದರೆ, ಜಿಲ್ಲೆಯ ಜಿಮ್ಸ್ನಲ್ಲಿರೋ ಕಡಿಮೆ ಸಾಮರ್ಥ್ಯದ ಯಂತ್ರದಲ್ಲಿ ಗಂಟೆಗೆ ಒಂದು ಟೆಸ್ಟ್ ಫಲಿತಾಂಶ ಪಡೆಯಬಹುದು. ನಮ್ಮಲ್ಲಿ ಇಂತಹ ಎರಡು ಯಂತ್ರಗಳಿದ್ದು ದಿನಕ್ಕೆ ತಲಾ 24 ರಂತೆ 84 ಟೆಸ್ಟ್ ಫಲಿತಾಂಶಗಳನ್ನು ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ರಾಜ್ಯದ ಎಲ್ಲಾ ಮೆಡಿಕಲ್ ಕಾಲೇಜುಗಳಲ್ಲಿ ಈ ಯಂತ್ರಗಳಿವೆ. ಆದರೆ ಮೊದಲ ಬಾರಿಗೆ ಅದನ್ನು ಯಶಸ್ವಿಯಾಗಿ ಬಳಸಿದ್ದು ಜಿಮ್ಸ್ ಎಂಬುದು ಇಡೀ ಜಿಲ್ಲೆಗೆ ಹೆಮ್ಮೆ ತರುವ ವಿಷಯವಾಗಿದೆ ಎಂದು ಡಾ. ಭೂಸರೆಡ್ಡಿ ತಿಳಿಸಿದ್ದು, ಇದ್ದಕ್ಕಾಗಿ ಸಚಿವರು, ಶಾಸಕರು, ಆಡಳಿತ ಸಿಬ್ಬಂದಿ ಸೇರಿದಂತೆ ಜಿಲ್ಲಾಡಳಿತದ ಎಲ್ಲರಿಗೂ ಧನ್ಯವಾದ ಸಹ ತಿಳಿಸಿದ್ದಾರೆ.