ಗದಗ :ಕ್ಷುಲ್ಲಕ ಕಾರಣಕ್ಕೆ ಪ್ರೊಬೆಷನರಿ ಪಿಎಸ್ಐ ಮತ್ತು ಅವರ ಸ್ನೇಹಿತರು ಸೇರಿ ಡಾಬಾ ಮಾಲೀನಕನ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಅಲ್ಲದೇ ಡಾಬಾವನ್ನು ಧ್ವಂಸಗೊಳಿಸಿ ಗೂಂಡಾಗಿರಿ ಮೆರೆದಿದ್ದಾರೆ ಎನ್ನಲಾಗ್ತಿದೆ. ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಬೇವಿನಕಟ್ಟಿ ಗ್ರಾಮದ ಬಳಿ ಈ ಪ್ರಕರಣ ನಡೆದಿದೆ. ಲಕ್ಕಿ ಡಾಬಾದ ಮಾಲೀಕ ಶ್ರೀಶೈಲ್ ಕಳ್ಳಿಮಠ ಎಂಬುವರ ತಲೆಗೆ ಸೋಡಾ ಗ್ಲಾಸ್ನಿಂದ ಹಲ್ಲೆ ಮಾಡಿ ಬಳಿಕ ದಾಬಾ ಧ್ವಂಸಗೊಳಿಸಿದ್ದಾರೆ ಎಂದು ದೂರಲಾಗಿದೆ.
ಸೋಮವಾರ ತಡರಾತ್ರಿ ಬಾಗಲಕೋಟೆಯ ನವನಗರದ ಪೊಲೀಸ್ ಠಾಣೆಯಲ್ಲಿ ಪ್ರೊಬೆಷನರಿ ಪಿ.ಎಸ್.ಐ ಹುದ್ದೆಯಲ್ಲಿರೋ ಅರವಿಂದ ಅಂಗಡಿ ಮತ್ತು ಇನ್ನೂ ಐದು ಜನ ಸ್ನೇಹಿತರು ಲಕ್ಕಿ ದಾಬಾಕ್ಕೆ ಊಟ ಮಾಡಲು ಹೋಗಿದ್ದರು. ಊಟ ಮಾಡಿದ ಬಳಿಕ ಹಿಂದಿನ ಸಣ್ಣ ಗಲಾಟೆ ಸಂಬಂಧ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಅರವಿಂದ ಅವರ ಸ್ನೇಹಿತ ಹನುಮಂತ ಎಂಬಾತ (ಈತನೂ ಸಹ ಆರ್ಮಿಯಲ್ಲಿ ಸೇವೆಯಲ್ಲಿರುವವನು) ಸೇರಿ ಗಲಾಟೆ ಮಾಡಿದ್ದಾರೆ ಎನ್ನಲಾಗ್ತಿದೆ.