ಗದಗ :ಸಂಗೀತ ನಿರ್ದೇಶಕ ಹಂಸಲೇಖ (hamsaleka statement) ಅವರು ಪೇಜಾವರ ಶ್ರೀಗಳ ಬಗ್ಗೆ ನೀಡಿರುವ ಹೇಳಿಕೆ ಸರಿಯಲ್ಲ ಎಂದು ಗದಗದಲ್ಲಿ ಶ್ರೀರಾಮ ಸೇನೆ ರಾಷ್ಟೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ (Pramod mutalik) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರ ಹೇಳಿಕೆ ಗಮನಿಸಿದ್ರೆ ಒಳಗೆ ಏನೇನೋ ತುಂಬಿಕೊಂಡಿದ್ದಾರೆ ಅನಿಸುತ್ತದೆ. ಸ್ವರ್ಗಸ್ತರಾದ ಪೇಜಾವರ ಶ್ರೀಗಳ ಬಗ್ಗೆ ಮಾತನಾಡಿರೋದು ಎಷ್ಟು ಸರಿ? ಅಸ್ಪೃಶ್ಯತೆ ತೊಲಗಿಸಲು ಬ್ರಾಹ್ಮಣ ಸ್ವಾಮೀಜಿಗಳಾದ ಪೇಜಾವರ ಶ್ರೀಗಳು ಮುಂದಾಗಿದ್ರು.
ಆದ್ರೆ, ಸ್ವಾಮಿಗಳು ಮಾಂಸ ತಿನ್ನಲು ಆಗುತ್ತಾ ಎಂದು ಕೇಳಿದ್ದು ಎಷ್ಟು ಸರಿ?. ನಿಮ್ಮ ಕ್ಷೇತ್ರ ಏನು? ನೀವು ಮಾತನಾಡಿದ ವಿಷಯ ಏನು?ಎಂದು ಆಕ್ರೋಶ ವ್ಯಕ್ತಪಡಿಸಿದ್ರು.
ಹಂಸಲೇಖ ವಿರುದ್ಧ ಶ್ರೀರಾಮ ಸೇನೆ ರಾಷ್ಟೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿರುವುದು.. ನಿಮ್ಮ ಹೇಳಿಕೆ ನಂತರ ನಿಮ್ಮ ಹೆಂಡತಿ ಬೈದ್ರು ಅಂತಾ ಹೇಳಿದ್ರಿ. ನಿಮ್ಮನ್ನು ಹೊರಗೆ ಹಾಕಬೇಕಿತ್ತು. ಇಷ್ಟು ವಯಸ್ಸಾಗಿದೆ. ಆದ್ರೆ, ಏನು ಮಾತನಾಡಬೇಕೆನ್ನುವ ಬುದ್ಧಿ ಇಲ್ಲವೇ? ಚಪ್ಪಲಿಯಲ್ಲಿ ಹೊಡೆದು ಕ್ಷಮೆ ಕೇಳೋದು ಸರಿಯಲ್ಲ. ನಿಮ್ಮ ಮನಸ್ಸಲ್ಲಿ ಕಸ, ಕಲ್ಮಶ ತುಂಬಿಕೊಂಡಿದೆ.
ಮೊದಲು ಕಸ ತೆಗೆದು ಹಾಕಿ. ಸ್ವಾಮೀಜಿಗಳ ಕೆಲಸವನ್ನು ಸ್ವಾಗತ ಮಾಡಬೇಕು. ಆದ್ರೆ, ಇನ್ನಷ್ಟು ಗೊಂದಲ ಸೃಷ್ಟಿಸುವುದು ಶೋಭೆ ತರುವಂತದ್ದಲ್ಲ ಎಂದು ಕೆಂಡಾಮಂಡಲರಾದರು. ಅಲ್ಲದೇ, ಇನ್ನೊಮ್ಮೆ ಈ ರೀತಿ ಹೇಳಿಕೆ ನೀಡಿದ್ರೆ ತಕ್ಕ ಉತ್ತರ ಕೊಡಬೇಕಾಗುತ್ತದೆಯೆಂದು ಎಚ್ಚರಿಕೆ ನೀಡಿದ್ದಾರೆ.
ದತ್ತ ಮಾಲಾಧಾರಿಗಳ ಮೇಲಿನ ಹಲ್ಲೆ:ಇದೇ ವೇಳೆ ಕೋಲಾರದಲ್ಲಿ ನಡೆದ ದತ್ತ ಮಾಲಾಧಾರಿಗಳ ಮೇಲಿನ ಹಲ್ಲೆಯನ್ನು ಖಂಡಿಸಿದರು. ಗೋದ್ರಾ ಮಾದರಿಯಲ್ಲಿ ದತ್ತ ಮಾಲಾಧಾರಿಗಳ ಮೇಲಾಗುತ್ತಿದ್ದ ದಾಳಿಯನ್ನು ಪೊಲೀಸರು ತಡೆದರು. 27 ಜನರಿದ್ದ ಮಿನಿ ಬಸ್ ಸುಡಲು ದುಷ್ಕರ್ಮಿಗಳು ಯತ್ನಿಸಿದ್ರು ಎಂದು ಮುತಾಲಿಕ್ ಆರೋಪಿಸಿದರು.
ಈ ರೀತಿಯ ಕಿಡಿಗೇಡಿ ಕೆಲಸ ಸಹಿಸಿಕೊಂಡು ಹಿಂದೂ ಸಮಾಜ ಸುಮ್ಮನೆ ಕೂರಲ್ಲ. ತ್ರಿಪುರದಲ್ಲಾದ ಗಲಾಟೆಗೆ ಕೆಲವರು ಸವಣೂರಲ್ಲಿ ಪ್ರತಿಭಟಿಸುತ್ತಾರೆ. ಆಯ್ತು ಪ್ರತಿಭಟನೆ ಮಾಡಿ. ಆದ್ರೆ, ಆರ್‌ಎಸ್‌ಎಸ್ ನಾಯಿಗಳಿಗೆ ಗುಂಡು ಹೊಡೀತಿವಿ ಅಂತಾ ಹೇಳಿದ್ದಾರೆ. ಆರ್‌ಎಸ್‌ಎಸ್ ನಿಮಗೇನು ಮಾಡಿದೆ? ಹಿಂಸೆಯಲ್ಲಿ ಅವರು ತೊಡಗಿಲ್ಲ.
ಈ ರೀತಿ ಮಾಡೋದು ನೋಡಿದ್ರೆ ಕರ್ನಾಟದಲ್ಲಿ ಗಲಭೆ ಸೃಷ್ಟಿಸುವ ಪ್ರಯತ್ನ ನಡೆದಿದೆ ಎನಿಸುತ್ತದೆ. ಇಂತಹ ಕಿಡಿಗೇಡಿಗಳನ್ನು ಹದ್ದು ಬಸ್ತಿನಲ್ಲಿ ಇಡಬೇಕೆಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ರು. ಇಲ್ಲವಾದರೆ ನಾವು ತಿರುಗಿ ಉತ್ತರ ಕೊಟ್ಟರೆ ನೀವು ಪಾಕಿಸ್ತಾನದವರೆಗೆ ಓಡಬೇಕಾಗುತ್ತದೆ. ಹಿಂದೂ ಸಮಾಜವನ್ನ ಗೌರವಿಸಿ ಸಂವಿಧಾನಾತ್ಮಕವಾಗಿರಬೇಕು ಎಂದರು.
ಇದನ್ನೂ ಓದಿ:ದತ್ತ ಮಾಲಾಧಾರಿಗಳ ಬಸ್ ಮೇಲೆ ಕಲ್ಲು ತೂರಾಟ ಆರೋಪ : ಕಿಡಿಗೇಡಿಗಳನ್ನು ಬಂಧಿಸುವಂತೆ ಮುತಾಲಿಕ್ ಆಗ್ರಹ
ದತ್ತಮಾಲಾಧಾರಿಗಳ ಮೇಲಿನ ಹಲ್ಲೆ ಖಂಡಿಸಿ ನಾಳೆ ಕೋಲಾರ್ ಬಂದ್ ಕರೆ ನೀಡಲಾಗಿದೆ. ಬಂದ್ನಲ್ಲಿ ನಾನೂ ಭಾಗಿಯಾಗಲಿದ್ದೇನೆ. ಬಂದ್ಗೆ ಸಹಕರಿಸಬೇಕೆಂದು ಕೋಲಾರ ಜನರಲ್ಲಿ ಮನವಿ ಮಾಡಿದರು.