ಗದಗ: ಇಷ್ಟು ದಿನ ಕಳ್ಳರು ಮನೆ ಬೀಗ ಮುರಿದು ಮನೆಯಲ್ಲಿನ ಒಡವೆ, ಹಣ ಕದಿಯುತ್ತಿದ್ದರು. ಆದರೆ, ಈಗ ಹೊಸ ವರಸೆ ಶುರು ಮಾಡಿಕೊಂಡಿದ್ದಾರೆ. ಅದೇನಪ್ಪಾ ಅಂದರೆ ಪೆಟ್ರೋಲ್ ಕಳ್ಳತನ.
ಗದಗ ಬೆಟಗೇರಿ ಜನರಿಗೆ ಈಗ ಹೊಸ ತಲೆನೋವು ಶುರುವಾಗಿದೆ. ಪೆಟ್ರೋಲ್ ಖದೀಮರ ಹಾವಳಿ ಹೆಚ್ಚಾಗಿದೆ. ನಿತ್ಯ ಹತ್ತಾರು ಬೈಕ್ಗಳಲ್ಲಿನ ಪೆಟ್ರೋಲ್ ರಾತ್ರೋರಾತ್ರಿ ಮಂಗಮಾಯ ಆಗ್ತಿದೆ. ಬೆಳಗ್ಗೆ ಹಾಕಿಸಿದ್ದ ಪೆಟ್ರೋಲ್ ರಾತ್ರಿ ಹೊತ್ತಿನಲ್ಲಿ ಇರೋದೆ ಇಲ್ಲ. ನೋಡಿದರೆ ಟ್ಯಾಂಕ್ ಖಾಲಿಯಾಗಿರುತ್ತೆ.
ಪೆಟ್ರೋಲ್ ಕಳ್ಳರ ಹಾವಳಿಗೆ ಬೇಸತ್ತ ಗದಗ ಜನತೆ ಅವಳಿ ನಗರ ಗಂಗಾಪುರಪೇಟೆ, ಜವಳಗಲ್ಲಿ ಅಜಾದ್ ರೋಡ್ಗಳಲ್ಲಿ ಸುಮಾರು 8 ಬೈಕ್ಗಳಲ್ಲಿನ ಪೆಟ್ರೋಲ್ ಕದ್ದು ಕಳ್ಳರು ಪರಾರಿಯಾಗಿದ್ದಾರೆ. ಮೂರರಿಂದ ನಾಲ್ಕು ಜನರ ಒಂದು ತಂಡವಿದ್ದು, ಮನೆ ಮುಂದೆ ನಿಲ್ಲಿಸಿದ್ದ ಬೈಕ್ಗಳಲ್ಲಿನ ಪೆಟ್ರೋಲ್ ಕದ್ದು ಬೈಕ್ ಸವಾರರ ನಿದ್ದೆಗಡೆಸುತ್ತಿದ್ದಾರಂತೆ.
ಇದನ್ನು ಓದಿ: ಡ್ರಗ್ಸ್ ಲಿಂಕ್ ಪ್ರಕರಣ: ವಿಚಾರಣೆ ವೇಳೆ ಕಣ್ಣೀರು ಹಾಕಿದ ತೆಲುಗು ನಟ
ನಿನ್ನ ರಾತ್ರಿಯೂ ಗಂಗಾಪುರ ಪೇಟೆಯಲ್ಲಿನ ಮಲ್ಲಪ್ಪ ಬಿಂಗಿ ಎಂಬುವವರ ಮನೆ ಮುಂದೆ ನಿಲ್ಲಿಸಿದ್ದ ಬೈಕ್ನಿಂದ ಪೆಟ್ರೋಲ್ ಕಳ್ಳತನ ಮಾಡಲು ಮುಂದಾಗಿದ್ದಾರೆ. ಈ ವೇಳೆ ಎಚ್ಚರಗೊಂಡ ಮನೆಯವರು ಲೈಟ್ ಆನ್ ಮಾಡಿದ್ದಾರೆ. ಇದನ್ನು ಅರಿತ ಕಳ್ಳರು ಬೈಕ್ನೊಳಗೆ ಬಾಟಲ್ ಬಿಟ್ಟು ಪರಾರಿಯಾಗಿದ್ದಾರೆ. ಬಳಿಕ ಮನೆಯವರು ಎದ್ದು ಬಂದು ನೋಡಿದಾಗ ಕಳ್ಳತನ ಬೆಳಕಿಗೆ ಬಂದಿದೆ.
ಈ ಪೆಟ್ರೋಲ್ ಖದೀಮರು ಕಳ್ಳತನ ಮಾಡುವಾಗ ಸಿಸಿಟಿವಿ ಇಲ್ಲದಿರುವ ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡು ಪಕ್ಕಾ ಪ್ಲ್ಯಾನ್ ಪ್ರಕಾರ ಮಾಡುತ್ತಾರೆ. ಸಂದಿ ಇರುವ ಜಾಗ ಮತ್ತು ಹೊರಗಡೆ ಯಾರೂ ಮಲಗಿರದೇ ಇರುವುದನ್ನು ಗಮನಿಸುತ್ತಾರೆ. ಹೀಗೆ ಎಲ್ಲವನ್ನೂ ನೋಡಿಕೊಂಡೇ ಕಳ್ಳತನ ಮಾಡ್ತಿದ್ದಾರೆ.
ಪೆಟ್ರೋಲ್ ಕಳ್ಳರು ಹಾವಳಿ ಹೆಚ್ಚಾಗುತ್ತಿದ್ದಂತೆ ಹೊರಗಡೆ ಬೈಕ್ ಬಿಟ್ಟು ಮಲಗೋದಕ್ಕೆ ಬೈಕ್ ಸವಾರರು ಹೆದರುತ್ತಿದ್ದಾರೆ. ಇನ್ನು ಇಷ್ಟೆಲ್ಲ ಸಮಸ್ಯೆಗಳಿದ್ದರೂ ಪೊಲೀಸರು ಗಸ್ತು ತಿರುಗುತ್ತಿಲ್ಲ ಎಂದು ಇಲ್ಲಿನ ಜನತೆ ಆರೋಪಿಸಿದ್ದಾರೆ.