ಗದಗ: ಈ ಊರಿನ ಯುವಕರು ನೋಡೋಕೇನೋ ಮನ್ಮಥರೇ. ಬೇಕಾದಷ್ಟು ಜಮೀನು, ನೌಕರಿ ಎಲ್ಲವೂ ಇದೆ. ಆದರೆ ಇವ್ರಿಗೆ ಕಂಕಣ ಭಾಗ್ಯವೇ ಕೂಡಿ ಬರ್ತಿಲ್ಲ.
ಪರಿಣಾಮ ಈ ಊರಿನಲ್ಲಿ ಸರಿಸುಮಾರು 100 ಕ್ಕೂ ಹೆಚ್ಚು ಜನ ಯುವಕರು ಮದುವೆ ಭಾಗ್ಯದಿಂದ ವಂಚಿತರಾಗಿದ್ದಾರೆ. ಕಿಟಕಿ ಬಾಗಿಲುಗಳಿಲ್ಲದ ಬಿದ್ದುಹೋಗಿರೋ ಮನೆಗಳು ತಗಡಿನ ಶೆಡ್ಗಳಲ್ಲಿ ಬದುಕು ದೂಡ್ತಿರೋ ಈ ಜನರಿಗೆ ಯಾರ್ ತಾನೇ ಹೆಣ್ಣು ಕೊಡ್ತಾರೆ ಹೇಳಿ.. ಹೌದು ಈ ಊರಿನ ಯುವಕರು 40 ದಾಟಿದ್ರೂ ಮದುವೆ ಆಗದೇ ಇರೋಕೆ ಕಾರಣ ಸೂರಿನ ಸಮಸ್ಯೆ.
ಗದಗ ಜಿಲ್ಲೆಯ ರೋಣ ತಾಲೂಕಿನ ಗಾಡಗೋಳಿ ಗ್ರಾಮದ ಮಲಪ್ರಭಾ ನದಿಯ ಸಂತ್ರಸ್ತರು. ಈ ಗ್ರಾಮದಲ್ಲಿ ಸರಿ ಸುಮಾರು 10 ವರ್ಷಗಳಿಂದ ಮದುವೆಗಳೇ ನಡೆದಿಲ್ಲವಂತೆ. ಯಾಕಂದ್ರೆ ಇಲ್ಲಿನ ಯುವಕರಿಗೆ ಯಾರೂ ಕನ್ಯೆಯನ್ನೇ ಕೊಡ್ತಿಲ್ವಂತೆ. ಹೀಗಂತ ಇಲ್ಲಿನ ಯುವಕರೇ ಗೋಳಾಡ್ತಿದ್ದಾರೆ.
ಈ ಗ್ರಾಮದ ಜನರಿಗೆ ವಾಸಿಸೋಕೆ ಯೋಗ್ಯವಾದ ಒಂದೇ ಒಂದು ಮನೆ ಇಲ್ಲ. ಇವರಿಗೆ ಮನೆ ಇಲ್ಲ ಮನೆ ಕಟ್ಟಿಸಿಕೊಳ್ಳಲು ಜಾಗವೂ ಇಲ್ಲ. ಇದರಿಂದ ಈ ಗ್ರಾಮಕ್ಕೆ ಯಾರೂ ಹೆಣ್ಣು ಕೊಡಲ್ಲ, ಬೇರೆ ಊರಿನವರು ಇಲ್ಲಿಂದ ಹೆಣ್ಣು ಸಹ ತರಲ್ಲ.ಈ ಗ್ರಾಮದ ಜನರಿಗೆ ಇದು ದೊಡ್ಡ ತಲೆನೋವಾಗಿದೆ. ಕೆಲವರು ತಮ್ಮ ಮಕ್ಕಳ ಮದುವೆ ಮಾಡೋಕೆ ಅಂತಾನೆ ಊರು ಬಿಟ್ಟು ಬೇರೆ ಊರಲ್ಲಿ ಹೋಗಿ ನೆಲೆಸಿದ್ದಾರೆ. ಹಾಗಾಗಿ ಈ ಭಾಗದ ಶಾಸಕರಾಗಿರುವ ಸಿ.ಸಿ ಪಾಟೀಲರೇ ನಮಗೆ ಕನ್ಯೆ ನೋಡಿ ಮದುವೆ ಮಾಡಿಸಿ ಅಂತ ಒತ್ತಾಯ ಮಾಡ್ತಿದ್ದಾರೆ.
ಇಷ್ಟಕ್ಕೆಲ್ಲಾ ಕಾರಣ ಈ ಭಾಗದ ಶಾಸಕರು ಮತ್ತು ಅಧಿಕಾರಿಗಳೇ ಕಾರಣ ಅಂತ ಈ ಗ್ರಾಮಸ್ಥರು ಆರೋಪ ಮಾಡ್ತಿದ್ದಾರೆ. ಇವರು ಮಲಪ್ರಭಾ ನದಿಯ ಪ್ರವಾಹಕ್ಕೆ ತುತ್ತಾಗಿ 2009ರಲ್ಲಿಯೇ ಮನೆ ಮಠ ಕಳೆದುಕೊಂಡು ಬೀದಿಗೆ ಬಿದ್ದವರು. ಆ ಸಂದರ್ಭದಲ್ಲಿ ಸರ್ಕಾರ ಸಂತ್ರಸ್ತರಿಗಾಗಿ ಕಟ್ಟಿಸಿದ್ದ ಸುಮಾರು 500 ಮನೆಗಳನ್ನು ಇನ್ನೂ ಹಂಚಿಕೆ ಮಾಡಿಲ್ಲ. ಪ್ರವಾಹ ಬಂದು ಇಡೀ ಊರು ಕೊಚ್ಚಿ ಹೋಗಿದೆ. ಹಾಗಾಗಿ ಊರನ್ನು ಬೇರೆ ಕಡೆ ಸ್ಥಳಾಂತರ ಮಾಡಿ ಮನೆ ಕಟ್ಟಿಸಿ ಸರಿಸುಮಾರು 10 ವರ್ಷ ಕಳೆದಿವೆ. ಆದರೂ ಸಹ ಇವರಿಗೆ ಮನೆ ಹಂಚಿಕೆ ಮಾಡಿಲ್ಲ. ಅವರಿಗೆ ಮನೆ ಹಕ್ಕುಪತ್ರ ವಿತರಣೆ ಮಾಡಿಲ್ಲ. ಇದಕ್ಕೆಲ್ಲಾ ಕಾರಣ ಅಧಿಕಾರಿಗಳು ಮತ್ತು ಶಾಸಕರ ಹುಸಿ ಭರವಸೆಗಳೇಎಂದು ಜನ ಕಿಡಿಕಾರಿದ್ದಾರೆ.
ನಮಗೆ ಯಾರೂ ಹೆಣ್ಣು ಕೊಡ್ತಿಲ್ಲ, ನೀವಾದರೂ ಮದುವೆ ಮಾಡಿಸಿ... ಒಬ್ಬ ಯುವಕ ಸುಮಾರು 25 ಬಾರಿ ವಧುಗಳನ್ನು ನೋಡಿ ಬಂದರೂ ಯಾರೂ ಸಹ ಮದುವೆ ಮಾಡಿಕೊಳ್ಳಲು ಒಪ್ಪಲಿಲ್ಲವಂತೆ. ಯಾಕೆಂದರೆ ಮನೆನೇ ಇಲ್ಲಾ ಅಂದರೆ ನಮ್ಮ ಮಗಳನ್ನು ಹೇಗೆ ನೋಡಿಕೊಳ್ತಿಯಾ ಅಂತ ಪ್ರಶ್ನೆ ಮಾಡ್ತಾರಂತೆ. ಹಾಗಾಗಿ ಶಾಸಕರೇ ನೀವಾದರೂ ನಮ್ಮ ಗೋಳು ನೋಡಿ ಕನ್ಯೆ ನೋಡಿ ಮದುವೆ ಮಾಡಿಸಿ ಅಂತ ಅಳಲು ತೋಡಿಕೊಳ್ತಿದ್ದಾರೆ.
ಸರ್ಕಾರ ಕಟ್ಟಿಸಿದ ಬಹುತೇಕ ಮನೆಗಳು ಬಿದ್ದು ಹೋಗಿವೆ. ಕೆಲವು ಮನೆಗಳ ಕಿಡಿಕಿ ಬಾಗಿಲುಗಳು ಕಿತ್ತು ಹೋಗಿವೆ. ವಿದ್ಯುತ್ ವ್ಯವಸ್ಥೇ ಮೊದಲೇ ಇಲ್ಲ, ಊರುಗಳಿಗೆ ರಸ್ತೆಗಳಿಲ್ಲ. ಇರೋ ರಸ್ತೆಗಳೂ ಕೆಸರಿನಿಂದ ತುಂಬಿಹೋಗ್ತವೆ.ಈ ಗ್ರಾಮಸ್ಥರು ಬಕ ಪಕ್ಷಿಯಂತೆ ಹತ್ತು ವರ್ಷಗಳಿಂದ ಮನೆಗಾಗಿ ಕಾಯ್ದು ಕಾಯ್ದು ಸೋತೋಗಿದ್ದಾರೆ. ಕಟ್ಟಿರುವ ಮನೆಯು ಬಿದ್ದೋಗಿವೆ. ಕಿಡಿಕಿ ಬಾಗಿಲು ಅಂತೂ ಮೊದಲೇ ಇಲ್ಲಾ. ಮನೆತುಂಬ ಗಿಡಗಂಟಿ ಮುಳ್ಳುಗಳು ಬೆಳೆದು ಬಿಟ್ಟಿದೆ. ಅದೇ ಮನೆ ಎದುರು ಶೆಡ್ ನಿರ್ಮಾಣ ಮಾಡಿ ಬದುಕು ಸಾಗಿಸುತ್ತಿದ್ದಾರೆ.