ಕರ್ನಾಟಕ

karnataka

ETV Bharat / state

ಭೂ ಒತ್ತುವರಿ ಆರೋಪ: ಗದಗ ವಿವಿ ಹಾದಿಗೆ ಬೇಲಿ ಹಚ್ಚುವ ಎಚ್ಚರಿಕೆ ನೀಡಿದ ನಾಗಾವಿ ರೈತರು

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್ಯ ಇಲಾಖೆಯ ವಿಶ್ವವಿದ್ಯಾಲಯಕ್ಕೆ ಸೇರಿದ ಜಾಗ ಎಂದು ಅಧಿಕಾರಿಗಳು ನಮ್ಮ ಜಮೀನಿನ ಹದ್ದನ್ನು ಗುರುತಿಸದೇ ತಮ್ಮಿಷ್ಟಕ್ಕೆ ಬಂದಂತೆ ಅಳತೆ ಮಾಡಿ ಗಡಿ ಗುರುತಿಸುತ್ತಿದ್ದಾರೆ. ಇದರಿಂದ ನಮಗೆ ಮೋಸವಾಗುತ್ತಿದೆ. ಸರ್ಕಾರ ನಮ್ಮ ಅಳಲನ್ನು ಆಲಿಸಬೇಕು. ಇಲ್ಲದಿದ್ದರೆ ಬೇಲಿ ಹಾಕಿ ಬಂದ್​​ ವಿವಿ ರಸ್ತೆಯನ್ನು ಬಂದ್​ ಮಾಡುತ್ತೇವೆ ಎಂದು ಅಧಿಕಾರಿಗಳಿಗೆ ನಾಗಾವಿ ಗ್ರಾಮದ ರೈತರು ಎಚ್ಚರಿಕೆ ನೀಡಿದ್ದಾರೆ.

nagavi-village-farmers-allegation-on-gadag-university-land
ನಾಗಾವಿ ರೈತರು

By

Published : Oct 25, 2021, 8:34 PM IST

ಗದಗ: ರಾಜ್ಯದ ಏಕೈಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್ಯ ಇಲಾಖೆಯ ವಿಶ್ವವಿದ್ಯಾಲಯ ಒಂದಿಲ್ಲೊಂದು ವಿವಾದಗಳಿಂದ ಸುದ್ದಿಯಾಗುತ್ತಿದೆ. ಇದೀಗ ವಿವಿ ವಿರುದ್ಧ ರೈತರು ಆಕ್ರೋಶಗೊಂಡಿದ್ದಾರೆ. ವಿವಿಯಿಂದ ರೈತರಿಗೆ ಒಳ್ಳೆಯದಾಗುವ ಬದಲು ಮೋಸವಾಗ್ತಿದೆ ಅಂತ ಆರೋಪ ಮಾಡಿದ್ದಾರೆ.

ಗದಗ ವಿವಿ ಹಾದಿಗೆ ಬೇಲಿ ಹಚ್ಚುವ ಎಚ್ಚರಿಕೆ ನೀಡಿದ ನಾಗಾವಿ ರೈತರು

ಜಿಲ್ಲೆಯ ನಾಗಾವಿ ಗ್ರಾಮದ ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಸುಮಾರು 70 ವರ್ಷಗಳಿಂದ ಉಳುಮೆ ಮಾಡಿಕೊಂಡು ಬರ್ತಿದ್ದ ಜಮೀನು ಈಗ ತಮ್ಮದೆಂದು ಆರ್.ಡಿ.ಪಿಆರ್ ವಿವಿಯ ಆಡಳಿತ ಅಧಿಕಾರಿಗಳು ಹೇಳುತ್ತಿದ್ದಾರೆ. ನಮ್ಮ ಜಮೀನಿನ ಹದ್ದನ್ನು ಗುರುತಿಸದೇ ತಮ್ಮಿಷ್ಟಕ್ಕೆ ಬಂದಂತೆ ಅಳತೆ ಮಾಡಿ ಗಡಿ ಗುರುತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ, ಇಂದು ಸರ್ವೆ ಮಾಡುತ್ತಿದ್ದ ಅಧಿಕಾರಿಗಳಿಗೆ ತಕರಾರು ತೆಗೆದು ಸರ್ವೆ ಕಾರ್ಯವನ್ನು ನಿಲ್ಲಿಸುವಂತೆ ಗ್ರಾಮದ 15ಕ್ಕೂ ಹೆಚ್ಚು ರೈತರು ತಗಾದೆ ತೆಗೆದರು.

ಇದರಿಂದ ಸ್ಥಳದಲ್ಲಿ ಕೆಲವೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ರೈತರು ಮತ್ತು ಅಧಿಕಾರಿಗಳ ಮಧ್ಯೆ ಕೆಲವೊತ್ತು ಮಾತಿನ ಚಕಮಕಿ ನಡೆಯಿತು. ಹೀಗಾಗಿ ಸ್ಥಳಕ್ಕೆ ಗದಗ ತಹಶಿಲ್ದಾರ್​​ ಮತ್ತು ಸಿಪಿಐ ಭೇಟಿ ನೀಡಿ ರೈತರ ಮನವೊಲಿಸುವ ಪ್ರಯತ್ನ ಮಾಡಿದರು. ಅಲ್ಲದೇ, ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸುವ ಭವರವಸೆ ನೀಡಿದರು. ಬರೀ ಮಾತಿಗೆ ಒಪ್ಪದ ರೈತರು ಕೈ ಬರಹದ ಮೂಲದ ಭರವಸೆ ಕೊಡಿ ಎಂದು ಪಟ್ಟು ಹಿಡಿದರು.

ವಿವಿ ಹಾದಿಗೆ ಬೇಲಿ: ವಿವಿ ಆವರಣದಲ್ಲಿ ಗುರುತಿಸಿದ ಜಮೀನಿನೊಳಗೆ ಸುಮಾರು 48 ಎಕರೆ ಜಮೀನು ಬರುತ್ತೆ. ಇದರ ಮಧ್ಯೆ ಕೆಲವು ರೈತರ ಜಮೀನನ್ನ ಖರೀದಿಸಿ ಸರಕಾರ ವಿವಿಗೆ ನೀಡಿದೆ. ಅದರಂತೆ ನಮ್ಮ ಜಮೀನುಗಳನ್ನು ಪರಿಗಣಿಸಿ ಖರೀದಿಸಿ ನಮಗೆ ಪರಿಹಾರ ನೀಡಿ ಅಂತ ರೈತರು ಒತ್ತಾಯ ಮಾಡ್ತಿದ್ದಾರೆ. ಆದರೆ, ವಿವಿಯ ಅಧಿಕಾರಿಗಳು ರೈತರು ಉಳುಮೆ ಮಾಡುತ್ತಿರುವ ಜಮೀನುಗಳನ್ನು ಸರ್ಕಾರದ ಜಾಗ ಅಂತ ಗಡಿ ಗುರ್ತಿಸುವ ಕೆಲಸ ಮಾಡ್ತಿದ್ದಾರೆ. ಇದು ನಮಗೆ ದೊಡ್ಡ ಮೋಸ ಮಾಡುವ ಹುನ್ನಾರ ನಡೆದಿದೆ. ಸರಕಾರ ನಮ್ಮ ಅಳಲನ್ನು ಆಲಿಸಬೇಕು. ಇಲ್ಲದಿದ್ದರೆ ವಿವಿ ಹಾದಿಗೆ ಬೇಲಿ ಹಾಕಿ ಬಂದ್ ಮಾಡುತ್ತೇವೆ ಎಂದು ಅಧಿಕಾರಿಗಳಿಗೆ ರೈತರು ಎಚ್ಚರಿಕೆ ನೀಡಿದ್ದಾರೆ.

ಈ ಹಿಂದೆ ಆರ್.ಡಿ.ಪಿಆರ್ ವಿವಿ ಆರಂಭದಲ್ಲಿ ಕೆಲವು ರೈತರ ಜಮೀನನ್ನು ಕೋಟ್ಯಂತರ ರೂ. ನೀಡಿ ಖರೀದಿ ಮಾಡಿದೆ. ಆದರೆ, ಉಳಿದ ಸಣ್ಣ ಪುಟ್ಟ ರೈತರ ಜಮೀನನ್ನು ಖರೀದಿ ಮಾಡದೇ ಹಾಗೆ ಬಿಟ್ಟಿದೆ. ಆದರೆ ಈಗ ಅದೇ ಜಮೀನು ವಿವಿಗೆ ಸೇರಿದೆ ಅಂತ ಅಧಿಕಾರಿಗಳು ಹೇಳ್ತಿದ್ದಾರಂತೆ. ಹಾಗಾಗಿ ನಮ್ಮ ತಾತ ಮುತ್ತಾತರಿಂದ ಉಳುಮೆ ಮಾಡಿಕೊಂಡು ಬಂದ ಜಮೀನು ಈಗ ಇವರು ಹೇಳಿದಂತೆ ಬಿಟ್ಟು ಕೊಡಲು ಸಾಧ್ಯವಿಲ್ಲ ಅಂತ ರೈತರು ಕಿಡಿಕಾರುತ್ತಿದ್ದಾರೆ.

ABOUT THE AUTHOR

...view details