ಲೋಕೋಪಯೋಗಿ ಸಚಿವ ಸಿಸಿ ಪಾಟೀಲ್ ಗದಗ: ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ಕಾಂಗ್ರೆಸ್ ಸಭೆ ಹಮ್ಮಿಕೊಂಡಿದೆ. ಅವರು ನೀಡಿದಂತಹ ನಾ ನಾಯಕಿ ಎನ್ನುವಂತಹ ಜಾಹೀರಾತು ನೋಡಿದೆ. ಆದರೆ, ನಾ ನಾಯಕಿ ಅರ್ಥ ಏನು ಎಂದು ನನಗೆ ಅರ್ಥವೇ ಆಗಲಿಲ್ಲ. ಕಾಂಗ್ರೆಸ್ನವರಿಗೆ ಅರ್ಥ ಆಗಿದೆಯೋ ಇಲ್ಲವೋ ಅನ್ನೋದು ಗೊತ್ತಿಲ್ಲ. ಒಬ್ಬ ನಾಯಕಿ ನಾ ನಾಯಕಿ ಅನ್ನೋ ಟೈಟಲ್ನಲ್ಲಿ ಕಾರ್ಯಕ್ರಮ ಮಾಡೋದು ಹಾಸ್ಯಾಸ್ಪದ ಎಂದು ಲೋಕೋಪಯೋಗಿ ಸಚಿವ ಸಿಸಿ ಪಾಟೀಲ್ ಹೇಳಿದರು.
ರಾಹುಲ್ ಗಾಂಧಿ ಕಂಡಂತೆ ಅತಿಯಾದ ಕನಸು ಪ್ರಿಯಾಂಕಾ ಗಾಂಧಿ ಕಾಣುವುದಿಲ್ಲ:ನಾ ನಾಯಕಿ ಕಾರ್ಯಕ್ರಮದ ಕುರಿತು ಗದಗನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಿಸಿ ಪಾಟೀಲ್, ಪ್ರಿಯಾಂಕಾ ಗಾಂಧಿ ಅವರ ಪಕ್ಷ, ಅವರ ಪಕ್ಷದ ಸಂಘಟನೆಗೆ ಬರುತ್ತಿದ್ದಾರೆ. ಅವರ ಆಗಮನದಿಂದಲಾದರೂ ಒಡೆದ ಕಾಂಗ್ರೆಸ್ ಒಂದಾಗಲಿ. ಸದೃಢ ವಿರೋಧ ಪಕ್ಷವಾಗಿ ಕೆಲಸ ಮಾಡುವಂತಾಗಲಿ ಅನ್ನೋದು ನಮ್ಮ ಆಶಯ.
ಸರಿಯಾಗಿ ನಿದ್ದೆ ಹತ್ತಿದಾಗ ಕನಸು ಬಿದ್ದೇ ಬೀಳುತ್ತೆ. ಪಿಎಂ ಆಗುವ ಕನಸನ್ನ ಪ್ರಿಯಾಂಕಾ ಗಾಂಧಿಯವರು ಬಹುತೇಹ ಕಾಣುವುದಿಲ್ಲ ಅನ್ನಿಸುತ್ತದೆ. ಅವರು ಅಷ್ಟೇನೂ ದಡ್ಡರೂ ಅಲ್ಲ. ಪ್ರಿಯಾಂಕಾ ಗಾಂಧಿ ತಿಳಿವಳಿಕೆ ಇರುವ ಒಬ್ಬ ಸಹೋದರಿ ಅಂತಾ ನಾನು ಭಾವಿಸಿದ್ದೇನೆ. ರಾಹುಲ್ ಗಾಂಧಿ ಕಂಡಂತೆ ಅತಿಯಾದ ಕನಸನ್ನ ಪ್ರಿಯಾಂಕಾ ಗಾಂಧಿ ಕಾಣುವುದಿಲ್ಲ ಎಂದು ಹೇಳಿದರು.
ನಾ ನಾಯಕಿ ಎಂದರೇನು ಎಂದು ಬಿಡಿಸಿ ಹೇಳಲ್ಲಿ:ನಾ ನಾಯಕಿ ಎಂಬ ಟೈಟಲ್ ಅನ್ನು ಪ್ರಿಯಾಂಕಾ ಗಾಂಧಿ ಅವರು ಹಾಕಿರಲಿಕ್ಕಿಲ್ಲ. ಅವರಿಗೆ ಕನ್ನಡ ಬರುವುದಿಲ್ಲ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯವರು ಇದನ್ನು ಹಾಕಿರಬೇಕು. ಯಾವ ಕಾರಣಕ್ಕೆ ಹಾಕಿದ್ದಾರೆ ಅನ್ನುವುದು ಗೊತ್ತಿಲ್ಲ. ನಮ್ಮ ನಾಯಕಿ ಅಂತಾ ಹಾಕಬಹುದಿತ್ತು. ಪಕ್ಷದ ಅಧಿನಾಯಕಿ ಎಂದಾದರು ಹಾಕಬಹುದಿತ್ತು. ಅವರದ್ದೇ ಪೋಸ್ಟರ್ ಹಾಕಿ ಅವರೇ 'ನಾ ನಾಯಕಿ' ಅಂತಾ ಹಾಕಿದ್ದು ನನ್ನಗೆ ಅರ್ಥವೇ ಆಗಲಿಲ್ಲ, ನಾನು ಅಪಹಾಸ್ಯ ಮಾಡುವುದಿಲ್ಲ, ಅವರಿಗೆ ಅರ್ಥವಾಗಿದ್ದರೇ ಇಂದು ನಡೆಯುವ ಕಾರ್ಯಕ್ರಮದಲ್ಲಿ ನಾ ನಾಯಕಿ ಎಂದರೇನು ಎಂದು ಬಿಡಿಸಿ ಹೇಳಲ್ಲಿ ಎಂದರು.
ಮುಂಬರು ಚುನಾವಣೆಯಲ್ಲಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರುತ್ತೇವೆ:ಬಸ್ ಯಾತ್ರೆ ಮಾಡುತ್ತಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅವರು ಯಾವುದೇ ಯಾತ್ರೆ ಮಾಡಲಿ. ನಮಗೆ ಯಾವುದೇ ಮುಜುಗರವೂ ಇಲ್ಲ, ಆತಂಕವೂ ಇಲ್ಲ. ಮುಂಬರುವ ಚುನಾವಣೆಯಲ್ಲಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ನಮಗೆ ಇದೆ. ಆರಂಭದಲ್ಲಿ ಸಿದ್ದರಾಮಯ್ಯ ಒಂದು ಬಸ್ನಲ್ಲಿ ಮತ್ತೊಂದು ಬಸ್ನಲ್ಲಿ ಡಿಕೆ ಶಿವಕಯಮಾರ್ ತೆರಳಲಿದ್ದಾರೆ ಎಂದು ಹೇಳಲಾಗಿತ್ತು. ಮಲ್ಲಿಕಾರ್ಜುನ್ ಖರ್ಗೆ ಅವರ ಮಧ್ಯಪ್ರವೇಶದಿಂದ ಇಬ್ಬರು ಕೂಡಿ ಒಂದೇ ಬಸ್ನಲ್ಲಿ ತೆರಳಿದ್ದಾರೆ. ಒಂದೇ ಬಸ್ನಲ್ಲಿ ಯಾತ್ರೆ ಪೂರ್ಣಗೊಳಿಸಿದರೆ ಒಳ್ಳೆಯದು ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ:'ನಾ ನಾಯಕಿ' ಸಮಾವೇಶ: ಬೆಂಗಳೂರಿಗೆ ಆಗಮಿಸಿದ ಪ್ರಿಯಾಂಕಾ ಗಾಂಧಿ