ಗದಗ: ವಾಹನಗಳಿಗೆ ಕವರ್ ಹಾಕೋದು ಸಾಮಾನ್ಯ. ಆದ್ರೆ ಈ ಪಟ್ಟಣದಲ್ಲಿ ಮನೆಗಳಿಗೆ ಕವರ್ ಹಾಕಿ ಬದುಕು ಸಾಗಿಸುವಂತಾಗಿದೆ ಇಲ್ಲಿನ ಜನರ ಪರಿಸ್ಥಿತಿ. ಫ್ಯಾಕ್ಟರಿ ಸುಸೂವ ವಿಷಗಾಳಿ, ಧೂಳಿಗೆ ಹೆದರಿದ ಜನ ರಕ್ಷಣೆಗಾಗಿ ಮನೆಗಳಿಗೆ ಪರದೆ ಹಾಕಿಕೊಂಡಿದ್ದಾರೆ.
ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಲಕ್ಷ್ಮೀ ನಗರದಲ್ಲಿ ನೂರಾರು ಮನೆಗಳಿವೆ. ಆದ್ರೆ ಇಲ್ಲಿರೋ ಹತ್ತಿ ಸಂಸ್ಕರಣಾ ಘಟಕ ಜನರ ಜೀವದ ಜೊತೆ ಆಟವಾಡುತ್ತಿದೆ. ಕಾರ್ಖಾನೆಯ ವಿಷಕಾರಿ ಗಾಳಿಗೆ ಜನ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಫ್ಯಾಕ್ಟರಿಯಿಂದ ಬರೋ ಧೂಳು ಮನುಷ್ಯರ ಉಸಿರಾಟದ ಮೂಲಕ ನೇರವಾಗಿ ದೇಹ ಸೇರ್ತಿದ್ದು, ಅನೇಕ ರೋಗಗಳಿಗೆ ತುತ್ತಾಗಿದ್ದಾರಂತೆ ಇಲ್ಲಿನ ಜನ.
ಇಲ್ಲಿ ಮನೆಗಳ ನಿರ್ಮಾಣಕ್ಕೂ ಮೊದಲು ಓಂಪ್ರಕಾಶ್ ಜೈನ್ ಎನ್ನೋರು ಈ ಬಡಾವಣೆಯಲ್ಲಿ ಶ್ರೀರಾಜೇಂದ್ರ ಕಾಟನ್ ಇಂಡಸ್ಟ್ರೀಸ್ ಎನ್ನೋ ಹತ್ತಿ ಸಂಸ್ಕರಣಾ ಕಾರ್ಖಾನೆಯನ್ನು ಸ್ಥಾಪಿಸಿದ್ರು.
ಕಾರ್ಖಾನೆ ಧೂಳಿನಿಂದ ತಪ್ಪಿಸಿಕೊಳ್ಳಲು ಮನೆಗೆ ಪರದೆ ಇದನ್ನು ಶಿಪ್ಟ್ ಮಾಡಿ ಅಂತ ಕೇಳಿಕೊಂಡ್ರೂ ಫ್ಯಾಕ್ಟರಿ ಆಡಳಿತ ಮಂಡಳಿ ಒಪ್ತಿಲ್ಲವಂತೆ. ಪರಿಸರ ಇಲಾಖೆ ಅಧಿಕಾರಿಗಳು ಕೂಡ ಕ್ಯಾರೆ ಅಂತಿಲ್ಲ. ಇದು ಕಾನೂನು ಬಾಹಿರವಾಗಿ ನಿರ್ಮಿಸಿದ ಕಾರ್ಖಾನೆಯಂತೆ. ಇದಕ್ಕೆ ಸರ್ಕಾರದ ಅನುಮತಿ ಪಡಿದಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಈ ಕಾರ್ಖಾನೆಯಿಂದ ಬರೋ ಧೂಳಿಗೆ ಹೆದರಿ ಮಕ್ಕಳನ್ನೂ ಸಹ ಹೊರಗೆ ಬಿಡ್ತಿಲ್ಲ ಇಲ್ಲಿನ ಜನ.
ಇನ್ನು ಪ್ರತಿದಿನ ಇಡೀ ಮನೆಯನ್ನು ತೊಳೆದಿಲ್ಲ ಅಂದ್ರೆ ಮನೆ ತುಂಬೆಲ್ಲಾ ಧೂಳೋ ಧೂಳು. ಮನೆಯ ಮುಂದೆ ಬೆಳೆಸಿರೋ ಪ್ರತಿ ಗಿಡದ ಎಲೆಗಳ ಮೇಲೂ ಸಹ ಧೂಳು ಕುಳಿತಿರೋದು ಸ್ಪಷ್ಟವಾಗಿ ಕಾಣುತ್ತೆ. ಈ ಡೇಂಜರ್ ಧೂಳಿನಿಂದ ತಪ್ಪಿಸಿಕೊಳ್ಳೋಕೆ ಇಲ್ಲಿನ ನಿವಾಸಿಗಳು ಮನೆ ಮುಂಭಾಗದಲ್ಲಿ ದೊಡ್ಡದಾದ ಪರದೆಗಳನ್ನು ಇಳೆ ಬಿಟ್ಟಿದ್ದಾರೆ. ಇನ್ನು ಮನೆಯಲ್ಲಿರೋ ನೀರಿನ ಟ್ಯಾಂಕ್ ಸೇರಿದಂತೆ ಪ್ರತಿ ವಸ್ತಗಳ ಮೇಲೂ ಸಹ ಧೂಳು ಕುಂತಿದ್ದು, ಹೇಗಪ್ಪ ಈ ಧೂಳಲ್ಲಿ ಬದುಕೋದು ಅಂತಿದ್ದಾರೆ ಲಕ್ಷ್ಮೀ ನಗರದ ಜನ.
ಅಚ್ಚರಿಯ ವಿಚಾರವೆಂದ್ರೆ ಈ ರಾಜೇಂದ್ರ ಕಾಟನ್ ಇಂಡಸ್ಟ್ರೀಸ್ ಲಕ್ಷ್ಮೇಶ್ವರ ಪುರಸಭೆಯ ಪರವಾನಗಿಯನ್ನೇ ಪಡೆದಿಲ್ಲವಂತೆ. ಇದನ್ನು ಸ್ವತಃ ಪುರಸಭೆಯ ಮುಖ್ಯಾಧಿಕಾರಿಗಳೇ ಹೇಳ್ತಾರೆ.