ಗದಗ: ಸ್ಥಳೀಯ ಚುನಾವಣೆಯಲ್ಲೂ ಗೆದ್ದು, ತಿಂಗಳಲ್ಲಿಯೇ ಕೋಟಿಗಟ್ಟಲೇ ಖರ್ಚು ಮಾಡಿ ಮನೆ ಕಟ್ಟಿಸುವ ಜನ ನಾಯಕರ ಮಧ್ಯ ದೇಶಕ್ಕಾಗಿ ರಾಷ್ಟ್ರೀಯ ಕ್ರೀಡೆ ಹಾಕಿಯನ್ನು ಪ್ರತಿನಿಧಿಸುವ ಆಟಗಾರನೊಬ್ಬ ರಸ್ತೆ ಪಕ್ಕದಲ್ಲಿ ಇವತ್ತೋ ನಾಳೆಯೋ ಬೀಳುವ ಮನೆಯಲ್ಲಿ ವಾಸವಾಗಿದ್ದಾನೆ. ಕಾಲು ಇಲ್ಲದ ತಂದೆ, ಕೂಲಿ ಮಾಡುವ ತಾಯಿ, ಬಡತನದ ಬೆಂಕಿಯಲ್ಲಿ ಯುವ ಪ್ರತಿಭೆಯೊಂದು ಸರ್ಕಾರದ ನಿರ್ಲಕ್ಷ್ಯದಿಂದ ಕಣ್ಮರೆಯಾಗುತ್ತಿದೆ.
ಹೌದು, ಗದಗ ಬೆಟಗೇರಿಯ ಗಾಂಧಿ ಬಡಾವಣೆಯ ನಿವಾಸಿ ಹಾಕಿ ಆಟಗಾರ ಹರೀಶ್ ಸೋಮಪ್ಪ ಮುಟಗಾರ, 2016ರಲ್ಲಿ ಬಾಂಗ್ಲಾ ದೇಶದಲ್ಲಿ ನಡೆದ ಅಂತಾರಾಷ್ಟ್ರೀಯ ಹಾಕಿ ಚಾಂಪಿಯನ್ ಶಿಪ್ ಟೀಮ್ನಲ್ಲಿ ಆಟವಾಗಿದ್ದ ಪ್ರತಿಭೆ. ಅಲ್ಲದೇ, ಇತ್ತೀಚೆಗೆ ನಡೆದ 'ಖೇಲೊ ಇಂಡಿಯಾ' ಕ್ರೀಡಾ ಕೂಟದಲ್ಲಿ ಬೆಂಗಳೂರು ಸೆಂಟ್ರಲ್ ಯುನಿವರ್ಸಿಟಿ ಟೀಮ್ಗೆ ಆಡಿ ಹೆಚ್ಚು ಗೋಲ್ ಗಳಿಸಿ ಅಬ್ಬರಿಸಿದ್ದ. ಆದರೆ, ಏನ್ ಬಂತು ದೇಶಕ್ಕಾಗಿ, ನಾಡಿಗಾಗಿ ಆಡಿದರೂ ಸರಿಯಾದ ಸೂರು ಇಲ್ಲದೇ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ.
ಹರೀಶ್ ತಂದೆ ಸೋಮಪ್ಪ ಅವರಿಗೆ ಇಪತ್ತು ವರ್ಷದ ಹಿಂದೆ ಅಪಘಾತದಲ್ಲಿ ಕಾಲು ಹೋಗಿದೆ. ತಾಯಿ ಕೂಲಿ ಕೆಲಸ ಮಾಡಿ ಕುಟುಂಬ ನಿರ್ವಹಣೆ ಮಾಡ್ತಿದಾರೆ. ಅಣ್ಣ ಖಾಸಗಿ ಕಂಪನಿಯಲ್ಲಿ ದುಡಿಯುತ್ತಿದ್ದು, ಅಷ್ಟಿಷ್ಟು ಸಹಾಯ ಆಗ್ತಿದೆ. ಕುಟುಂಬದ ಪರಿಸ್ಥಿತಿ ಹೀಗಿದ್ದರೂ 23 ವರ್ಷದ ಹರೀಶ್ ದೇಶಕ್ಕಾಗಿ ಮತ್ತಷ್ಟು ಚಿನ್ನ ಗೆಲ್ಬೇಕು ಅನ್ನೋ ಉಮೇದಿಯಲ್ಲಿದ್ದಾರೆ.