ಗದಗ:ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಇಂದು ಅನ್ನದಾತರ ಆಕ್ರೋಶದ ಕಟ್ಟೆ ಒಡೆದಿತ್ತು. 41ನೇ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ರಾಜ್ಯ ಸೇರಿದಂತೆ ಹರಿಯಾಣ, ಪಂಜಾಬ್ ಮತ್ತು ದೆಹಲಿಯಿಂದ ರೈತ ನಾಯಕರು ಆಗಮಿಸಿದ್ದರು.
ಬಂಡಾಯದ ನಾಡಲ್ಲಿ ರೈತರ ರಣಕಹಳೆ ಪಟ್ಟಣದ ಬೀದಿಯಲ್ಲಿ ರೈತ ಸೇನಾ ಕರ್ನಾಟಕ, ಮಹದಾಯಿ, ಕಳಸಾ ಬಂಡೂರಿ ಹೋರಾಟ ಸಮಿತಿ ಹಾಗೂ ಕಬ್ಬ ಬೆಳೆಗಾರರ ಸಂಘ ಸೇರಿದಂತೆ 20 ಕ್ಕೂ ಹೆಚ್ಚು ಸಂಘಟನೆ ಮುಖಂಡರು ಹಾಗೂ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಭಾಗಿಯಾಗಿದ್ದರು. ಹಸಿರು ಶಾಲು ತಿರುಗಿಸುತ್ತಾ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಹಲವಾರು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಾ ಬಂದ್ರೂ ಮಹದಾಯಿ, ಕಳಸಾ ಬಂಡೂರಿ ಯೋಜನೆ ಜಾರಿಯಾಗಿಲ್ಲ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ಲಕ್ಷ್ಯವೇ ಕಾರಣ ಎಂದು ದೂರಿದ್ರು.
ರೈತ ಸೇನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಮಾತನಾಡಿ, ಬೇರೆ ರಾಜ್ಯಗಳ ನಾಯಕರಿಗಿಂತ ನಮ್ಮ ರಾಜ್ಯದ ರಾಜಕೀಯ ನಾಯಕರೇ ಹೆಚ್ಚು ರಾಜಕಾರಣ ಮಾಡ್ತಿದ್ದಾರೆ. ಹಾಗಾಗಿ ನಾವು ಸುಪ್ರೀಂ ಕೋರ್ಟ್ ಮೂಲಕ ನ್ಯಾಯ ಪಡೆದುಕೊಳ್ಳುತ್ತೇವೆ ಎಂಬ ಸಂದೇಶ ರವಾನಿಸಿದ್ರು.
ರಾಷ್ಟ್ರೀಯ ರೈತ ಹೋರಾಟದ ಮೂಂಚೂಣಿ ನಾಯಕರಾದ ಪಂಜಾಬ್ ನ ಹರಿಖೇತಸಿಂಗ್, ಹರಿಯಾಣದ ದೀಪಕ ಲಂಬಾ, ಹಿರಿಯ ಸಾಮಾಜಿಕ ಹೋರಾಟಗಾರ ಎಸ್ ಆರ್ ಹಿರೇಮಠ, ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ, ಶಂಕ್ರಣ್ಣ ಅಂಬಲಿ, ವಿಜಯ್ ಕುಲಕರ್ಣಿ ಸೇರಿದಂತೆ ಹಲವು ರೈತ ಮುಖಂಡರು ಬೃಹತ್ ಸಮಾವೇಶದಲ್ಲಿ ಭಾಗಿಯಾಗಿದ್ದರು. ಹರಿಯಾಣದ ರೈತ ನಾಯಕ ದೀಪಕ್ ಲಂಬಾ ಮಾತನಾಡಿ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು. ಕೇಂದ್ರ ಸರ್ಕಾರ ತಂದಿರುವ ಮೂರು ಕೃಷಿ ಕಾಯ್ದೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಂಡಾಯದ ನಾಡಿನಲ್ಲಿ ಅನ್ನದಾತರು ರೋಷಾವೇಶ ಪ್ರದರ್ಶಿಸಿದರು. ಮಹದಾಯಿ ಯೋಜನೆ ಹೆಸರಿನಿಂದ ಆಡಳಿತಕ್ಕೆ ಬಂದ ಜನಪ್ರತಿನಿಧಿಗಳು ಯೋಜನೆ ಜಾರಿ ಕುರಿತು ನಿರ್ಲಕ್ಷ್ಯ ತೋರಿಸುತ್ತಿರೋದಕ್ಕೆ ಕಿಡಿಕಾರಿದರು. ರೈತ ಸಂಘಟನೆಗಳು ಒಂದಾಗಿ ಮತ್ತೊಮ್ಮೆ ರಣಕಹಳೆ ಊದಿದ್ದು, ಮತ್ತೆ ಮಹದಾಯಿ ಹೋರಾಟ ಉಗ್ರರೂಪ ತಾಳುವ ಮುನ್ಸೂಚನೆ ನೀಡಲಾಗಿದೆ.