ಗದಗ : ಕಾರ್ಮಿಕರ ಕಾರ್ಡ್ ಮಾಡಿಸಿಕೊಡುವುದಾಗಿ ಹೇಳಿ ವ್ಯಕ್ತಿವೋರ್ವ ಹಣ ವಸೂಲಿ ಮಾಡಿದ್ದಾನೆಂದು ಜನರು ಆತನನ್ನು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಗದಗದ ಮಸಾರಿ ಪ್ರದೇಶದಲ್ಲಿ ನಡೆದಿದೆ. ಇಲ್ಲಿ ಚಿತ್ರದುರ್ಗ ಮೂಲದ ಖಾಸಗಿ ಸಂಸ್ಥೆ ಕಾರ್ಯ ನಿರ್ವಹಣೆ ಮಾಡುತ್ತಿದೆ. ಈ ಸಂಸ್ಥೆಯ ನಿರ್ದೇಶಕ ಎಸ್. ಕುಮಾರ್ ಎನ್ನುವಾತನೇ ವಂಚಕ ಎಂದು ಮಹಿಳೆಯರು ಆರೋಪಿಸಿದ್ದಾರೆ.
ಗದಗ ತಾಲೂಕು, ಶಿರಹಟ್ಟಿ ಲಕ್ಷ್ಮೇಶ್ವರದ ಹಲವು ಹಳ್ಳಿಗಳ ಸಾವಿರಾರು ಮಹಿಳೆಯರಿಗೆ, ಸರ್ಕಾರ ನೀಡುವ ಕಾರ್ಮಿಕರ ಕಾರ್ಡ್ ಮಾಡೋದಾಗಿ ಹೇಳಿ ವಂಚನೆ ಮಾಡಿದ್ದಾನೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ಒಂದು ಕಾರ್ಡ್ಗೆ 1700 ರೂಪಾಯಿ ಪಡೆದು, ಕಾರ್ಮಿಕ ಕಾರ್ಡ್ ನೀಡದೆ ವಂಚನೆ ಮಾಡಿದ್ದಾನೆ ಎನ್ನಲಾಗಿದೆ. ಹೀಗಾಗಿಯೇ ಕದಡಿ ಗ್ರಾಮ ಸೇರಿದಂತೆ ಜಿಲ್ಲೆಯ ಗ್ರಾಮೀಣ ಭಾಗದ ನೂರಾರು ಮಹಿಳೆಯರು ಹಾಗೂ ಕಾರ್ಮಿಕರು ಆಗಮಿಸಿ ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ವಿಶ್ವ ಸಂಸ್ಥೆಯಿಂದ ನಿಮಗೆ ಹೆಚ್ಚಿನ ಹಣ ಬರುತ್ತದೆ ಅಂತಾ ಹೇಳಿ ಗ್ರಾಮೀಣ ಭಾಗದ ಜನರ ಮುಗ್ಧತೆಯನ್ನು ದುರ್ಬಳಕೆ ಮಾಡಿಕೊಂಡು ಹಣ ವಸೂಲಿ ಮಾಡಿದ್ದಾನೆ. ನಿಮ್ಮ ಮಕ್ಕಳಿಗೆ ಶಿಕ್ಷಣ, ಮದುವೆ ಕಾರ್ಯಕ್ಕೆ ಹಣ ಹಾಗೂ ಅನಾರೋಗ್ಯ ವೇಳೆ ಹಣ ಬರುತ್ತದೆ ಎಂದು ಹೇಳಿದ್ದಾನೆ. ಇವರ ಬಣ್ಣ ಬಣ್ಣದ ಮಾತುಗಳನ್ನು ನಂಬಿ ಗದಗ ಜಿಲ್ಲೆಯ ಸಾವಿರಾರು ಬಡ ಜನರು 17 ನೂರು ರೂಪಾಯಿ ಹಣ ನೀಡಿದ್ದಾರೆ. ಆದರೆ ಈವರೆಗೆ ಸಮರ್ಪಕವಾಗಿ ಕಾರ್ಮಿಕ ಇಲಾಖೆ ಕಾರ್ಡ್ ಬಂದಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.