ಗದಗ:ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ದ್ಯಾಮಣ್ಣ ನೀರಲಗಿ ಹಾಗೂ ಜ್ಯೋತಿ ನೀರಲಗಿ ದಂಪತಿ, ಗ್ರಾಮದಲ್ಲಿ ಜೀವನ್ ಹೆಸರಿನ ಲೇಔಟ್ ನಿರ್ಮಾಣ ಮಾಡ್ತಿದಾರೆ. ಲೇಔಟ್ನಲ್ಲಿ ಸುಮಾರು 40 ಸೈಟ್ ನಿರ್ಮಿಸಿ, ಬಡವರಿಗೆ ವಸತಿ ರಹಿತರಿಗೆ ಉಚಿತವಾಗಿ ದಾನ ಮಾಡಬೇಕು ಎಂದುಕೊಂಡಿದ್ದಾರೆ. ಈ ಮೂಲಕ ಬಾಲ್ಯದಲ್ಲೇ ಇಹ ಲೋಕ ತ್ಯಜಿಸಿರುವ ಕಂದಮ್ಮ 'ಜೀವನ್' ಹೆಸರನ್ನು ಗ್ರಾಮಸ್ಥರು ಶಾಶ್ವತವಾಗಿ ನೆನಪ್ಪಿಟ್ಟುಕೊಳ್ಳುವಂತೆ ಮಾಡ್ತಿದಾರೆ.
ಅಲ್ಪಾಯುವಾಗಿದ್ದ ಜೀವನ್ 6 ವರ್ಷದವನಿದ್ದಾಗ ಅನಾರೋಗ್ಯಕ್ಕೆ ತುತ್ತಾಗಿ, ಜೀವನದ ಪಯಣ ಮುಗಿಸಿದ್ದಾನೆ. ದಂಪತಿ ಮದ್ವೆಯಾಗಿ ಎಂಟು ವರ್ಷದ ಬಳಿಕ ಜೀವನ್ ಹುಟ್ಟಿದ್ದ. ಒಂದು ವರ್ಷ ಆರೋಗ್ಯವಾಗಿದ್ದ ಜೀವನ್ ನಂತರದಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದ. 2019 ಡಿಸೆಂಬರ್ 21 ರಂದು ಮೆದುಳು ಜ್ವರದಿಂದ ಮಗು ತೀರಿ ಹೋಗಿದ್ದಾನೆ.
ಸಾಲ ತೀರಿಸಲು ಜಮೀನು ಮಾರಾಟ: ಮಗುವಿನ ಚಿಕಿತ್ಸೆಗೆ ಎಂದು ಮಾಡಿದ್ದ ಸಾಲವನ್ನು ತೀರಿಸಲು ಮೂರು ಎಕರೆ ಜಮೀನು ಮಾರಾಟ ಮಾಡಿದ್ದಾರೆ. ಸದ್ಯ ಇರುವ ಐದು ಎಕರೆ ಜಾಗದಲ್ಲಿ ಒಂದು ಎಕರೆಯಲ್ಲಿ ಲೇಔಟ್ ಮಾಡಿ, ದಾನ ಮಾಡಬೇಕು ಎಂಬ ಕನಸು ಕಟ್ಟಿಕೊಂಡಿದ್ದಾರೆ. ಒಂದು ಮಗುವನ್ನು ದತ್ತು ಪಡೆದು ಸಾಕುವುದಕ್ಕಿಂತ, ಕಡು ಬಡವರ ಕನಸಿನ ಮನೆಗೆ ಜಾಗ ಕೊಟ್ಟು ಅವರ ಮಕ್ಕಳಲ್ಲಿ ಜೀವನ ಪ್ರತಿರೂಪ ಕಾಣ್ಬೇಕು ಅನ್ನೋದು ಜ್ಯೋತಿ ಅವರ ಮನಸ್ಸಿನ ಮಾತಾಗಿದೆ.