ಗದಗ: ಕೊಲ್ಲುವವನು ಒಬ್ನಿದ್ರೆ ಕಾಯುವವನೂ ಒಬ್ನಿರ್ತಾನೆ ಎನ್ನೋ ಮಾತಿಗೆ ಉದಾಹರಣೆಯಾಗಿರುವ ಘಟನೆಯೊಂದು ಗದಗ ಜಿಲ್ಲೆಯಲ್ಲಿ ನಡೆದಿದೆ. ಇಡೀ ಗ್ರಾಮಕ್ಕೆ ಗ್ರಾಮವೇ ಪ್ರವಾಹಕ್ಕೆ ಹೆದರಿ ಸುರಕ್ಷಿತ ಸ್ಥಳಕ್ಕೆ ಹೋಗಿತ್ತು. ಆದರೂ ಪವಾಡ ಸದೃಶ್ಯ ರೀತಿಯಲ್ಲಿ ಬೆಕ್ಕೊಂದು ಬದುಕುಳಿದಿದೆ.
ಕೊನೆಗೂ ಬದುಕಿದ ಬಡಜೀವ... ಪ್ರವಾಹಕ್ಕೆ ಸಿಲುಕಿ ವಾರದ ನಂತರ ಜೀವಂತ ಬಂತು ಬೆಕ್ಕಿನ ಮರಿ!
ರಾಜ್ಯದಲ್ಲಿ ಉಂಟಾಗಿರುವ ಪ್ರವಾಹದಿಂದ ಜೀವ ಉಳಿಸಿಕೊಂಡರೆ ಸಾಕು ಎನ್ನುವಷ್ಟರ ಮಟ್ಟಿಗೆ ಪರಿಸ್ಥಿತಿ ಉಂಟಾಗಿದೆ. ಪ್ರಾಣಿಗಳು ಸಹ ತಮ್ಮ ಪ್ರಾಣ ರಕ್ಷಣೆ ಮಾಡಿಕೊಳ್ಳಲು ಹರಸಾಹಸ ಪಡುತ್ತಿವೆ. ಇಲ್ಲೊಂದು ಬೆಕ್ಕು ಪ್ರವಾಹದಿಂದ ಪ್ರಾಣ ಉಳಿಸಿಕೊಂಡು ಮತ್ತೆ ಸಾಕಿದವರ ಕೈ ಸೇರಿದೆ.
ಜಿಲ್ಲೆಯ ರೋಣ ತಾಲೂಕಿನ ಹೊಳೆ ಹಡಗಲಿ ಗ್ರಾಮದ ಮಲ್ಲವ್ವ ಮಣ್ಣೂರ, ಜಲಪ್ರಳಯದಿಂದ ತಪ್ಪಿಸಿಕೊಳ್ಳಲು ಗ್ರಾಮದ ಹೊರವಲಯದ ಆಸರೆ ಮನೆಯಲ್ಲಿ ಆಶ್ರಯ ಪಡೆದಿದ್ದಳು. ಆದರೆ ಆಕೆ ಸಾಕಿದ್ದ ಮುದ್ದಿನ ಬೆಕ್ಕಿನ ಮರಿ ಪ್ರವಾಹದಲ್ಲಿ ಸಿಲುಕಿತ್ತು. ನೆರೆ ಇಳಿದ ಹಿನ್ನೆಲೆಯಲ್ಲಿ ಮಲ್ಲವ್ವ ತನ್ನ ಮನೆಗೆ ಮರಳಿದ್ದಳು. ಕೆಸರುಮಯವಾದ ಮನೆಯಲ್ಲಿ ಅಟ್ಟದ ಮೇಲೆ ಪವಾಡ ಸದೃಶ್ಯ ರೀತಿಯಲ್ಲಿ ಬದುಕುಳಿದಿದ್ದ ಬೆಕ್ಕು ಹೊರಬಂದು ಮನೆಯೊಡತಿಯನ್ನು ಸೇರಿಕೊಂಡಿತು.
ಮುದ್ದಿನ ಬೆಕ್ಕನ್ನು ಕಂಡ ಮಹಿಳೆ, ಪ್ರೀತಿಯಿಂದ ಅದನ್ನು ಎತ್ತಿಕೊಂಡು ಬುಟ್ಟಿಯಲ್ಲಿ ಹಾಕಿಕೊಂಡು ಮುದ್ದಿಸಿ, ಒಂದಷ್ಟು ಆಹಾರ ಕೊಟ್ಟು ಸಂತೈಸಿದಳು. ಆರು ದಿನದ ನಂತರ ಮತ್ತೆ ಬೆಕ್ಕನ್ನು ಕಂಡು ಮಲ್ಲವ್ವ ಭಾವುಕಳಾದಳು.