ಹುಬ್ಬಳ್ಳಿ: ಪ್ರೀತಿಸಲು ನಿರಾಕರಿಸಿದ ಯುವತಿಯ ಮೇಲೆ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿ, ಬಳಿಕ ತಾನೂ ಆತ್ಮಹತ್ಯೆಗೆ ಪ್ರಯತ್ನಿಸಿದ ಯುವಕನಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಪ್ರಕರಣದ ಹಿನ್ನೆಲೆ:
ವೆಂಕಟೇಶ್ವರ ನಗರದ ಮೇಘನಾ ಚಂದ್ರಶೇಖರ ಜಾಳಗಿ ಎಂಬುವರಿಗೆ ರಾಯಚೂರು ಮೂಲದ ಅಭಿನವ ಕುಲಕರ್ಣಿ ಎಂಬ ಯುವಕ ಫೋನ್ ಹಾಗೂ ಮೆಸೇಜ್ ಮಾಡಿ ತನ್ನ ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ. ಯುವತಿ ಪ್ರೀತಿ ಮಾಡಲು ಒಪ್ಪದ್ದರಿಂದ ಆರೋಪಿ ಸಿಟ್ಟಿನಿಂದ 2015ರ ನ.29 ರಂದು ಹುಬ್ಬಳ್ಳಿ ಗೋಕುಲ ರೋಡ್ ಅರ್ಬನ್ ಓಯಾಸಿಸ್ ಮಾಲ್ನಲ್ಲಿ ಯುವತಿಗೆ ಚಾಕುವಿನಿಂದ ಕುತ್ತಿಗೆ ಹಾಗೂ ಹೊಟ್ಟೆಗೆ ಇರಿದು ಕೊಲೆ ಮಾಡಲು ಪ್ರಯತ್ನಿಸಿದ್ದ. ಅಲ್ಲದೇ ತಾನೂ ಸಹ ಅದೇ ಚಾಕುವಿನಿಂದ ತನ್ನ ಕುತ್ತಿಗೆ ಹಾಗೂ ಹೊಟ್ಟೆಗೆ ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ. ಈ ಬಗ್ಗೆ ಯುವತಿ ದೂರು ನೀಡಿದ್ದಳು.
ಹುಬ್ಬಳ್ಳಿ ಗೋಕುಲ ರೋಡ್ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆಃ 140/2015 ಕಲಂ: 307, 354 (ಡಿ) (1), 309 ಐಪಿಸಿ ಅಡಿ ಆಗ ಕರ್ತವ್ಯದಲ್ಲಿದ್ದ ಗೋಕುಲ ರೋಡ್ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಎಸ್. ಕೆ. ಕುರಗೋಡಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡು ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.