ಹುಬ್ಬಳ್ಳಿ :ದೃಢ ನಿರ್ಧಾರ, ಸಾಧಿಸುವ ಛಲ ಹಾಗೂ ಸತತ ಪರಿಶ್ರಮ ಇದ್ದರೆ ಬಡತನ, ಮೂಲಭೂತ ಸೌಲಭ್ಯಗಳ ಕೊರತೆ ಎಲ್ಲವನ್ನೂ ಮೀರಿ ಸಾಮಾನ್ಯ ವ್ಯಕ್ತಿಯೂ ಸಹ ಅತ್ಯುನ್ನತ ಸಾಧನೆ ಮಾಡಲು ಸಾಧ್ಯ ಎಂಬುದನ್ನು ಸಿದ್ದಲಿಂಗಪ್ಪ ಪೂಜಾರಿ ನಿರೂಪಿಸಿದ್ದಾರೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ್. ಎಸ್ ಹೇಳಿದ್ದಾರೆ.
ನಗರದ ಗೋಕುಲ ರಸ್ತೆಯಲ್ಲಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ 589ನೇ ರಾಂಕ್ ಪಡೆದಿರುವ ಸಿದ್ದಲಿಂಗಪ್ಪ ಪೂಜಾರಿ ಅವರಿಗೆ ಅಭಿನಂದನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇದನ್ನೂ ಓದಿ :UPSCಯಲ್ಲಿ 3ನೇ ರ್‍ಯಾಂಕ್ ಪಡೆದ ಗಾಮಿನಿ ಸಿಂಗ್ಲಾ.. ಕರ್ನಾಟಕ ಸಾಧಕರ ವಿವರ ಇಲ್ಲಿದೆ..
ನಮ್ಮ ಸಂಸ್ಥೆಯ ಬಸ್ ಕಂಡಕ್ಟರ್ ಮಗ ಇಂದು ದೇಶದ ಅತ್ಯುನ್ನತ ಪರೀಕ್ಷೆಯಲ್ಲಿ ಟಾಪರ್ ಆಗಿರುವುದು ಹೆಮ್ಮೆಯ ವಿಷಯವಾಗಿದೆ. ಕಳೆದ ವರ್ಷವೂ ಸಹ ಒಬ್ಬ ಸಿಬ್ಬಂದಿಯೊಬ್ಬರ ಮಗ ಯುಪಿಎಸ್ಸಿ ಪರೀಕ್ಷೆಯಲ್ಲಿ ಉನ್ನತ ಸಾಧನೆ ಮಾಡಿದ್ದಾರೆ. ವಾಕರಸಾ ಸಂಸ್ಥೆಯಲ್ಲಿ 20 ಸಾವಿರಕ್ಕೂ ಹೆಚ್ಚು ನೌಕರರಿದ್ದಾರೆ. ಅವರ ಕುಟುಂಬದಲ್ಲಿ ಕನಿಷ್ಠ ಐದರಿಂದ ಆರು ಸಾವಿರ ಮಕ್ಕಳು ಪದವಿ ವಿದ್ಯಾಭ್ಯಾಸದ ಹಂತದಲ್ಲಿರುತ್ತಾರೆ. ಅಂತವರಿಗೆಲ್ಲ ಇವರ ಸಾಧನೆ ಪ್ರೇರಣೆಯಾಗಲಿ. ಪ್ರತಿ ವರ್ಷ ಸಾಧಕರ ಸಂಖ್ಯೆ ಹೆಚ್ಚಲಿ. ಮುಂದಿನ ದಿನಗಳಲ್ಲಿ ಸಿಬ್ಬಂದಿಯ ಮಗನೊಬ್ಬ ಸಂಸ್ಥೆಯ ಉನ್ನತಾಧಿಕಾರಿ ಹುದ್ದೆಗೆ ಬರುವಂತಾಗಲಿ ಎಂದು ಭರತ್. ಎಸ್ ಅವರು ಆಶಿಸಿದರು.