ಹುಬ್ಬಳ್ಳಿ:ಗ್ಯಾರಂಟಿ ಯೋಜನೆ ವಿಚಾರದಲ್ಲಿ ದಿನಾ ಒಂದು ಕಂಡೀಷನ್ ಹಾಕಿ ಜನರಿಗೆ ಮೋಸ ಮಾಡುವ ಕೆಲಸ ಮಾಡ್ತಿದೀರಿ. ಆದ್ರೆ ತಪ್ಪನ್ನು ಮುಚ್ಚಿಕೊಳ್ಳಲು ಪ್ರಧಾನಿ ಮೋದಿ, ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಕಾಂಗ್ರೆಸ್ನವರು ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು "ಏನೇ ಆದ್ರು ಮೋದಿಗೆ ಬೈದು ಬಿಡೋದು. ಜನರಿಗೆ ಮಾತು ಕೊಟ್ಟೀದಿರಿ. ಅಕ್ಕಿ ಕೊಡಿ. ಕೇಂದ್ರ ಸರ್ಕಾರ ಇಡೀ ದೇಶದಲ್ಲಿ ಐದು ಕೆ.ಜಿ ಅಕ್ಕಿ ಕೊಡ್ತಿದೆ. ಕರ್ನಾಟಕದಲ್ಲೂ ನಾವು ಐದು ಕೆಜಿ ಅಕ್ಕಿ ಕೊಡ್ತಿದ್ದೇವೆ. ಇದು ಸಿಎಂ ಸಿದ್ದರಾಮಯ್ಯನವರ ಅಕ್ಕಿ ಅಲ್ಲ. 10 ಕೆ.ಜಿ ಅಕ್ಕಿಯನ್ನು ಅವರು ಕೊಡ್ತೀನಿ ಅಂದಿದ್ರು. ಮತ ಪಡೆಯುವಾಗ ಕೇಂದ್ರದ ಅಕ್ಕಿ ಬಗ್ಗೆ ಸ್ಪಷ್ಟಪಡಿಸಿಲ್ಲ. ಇದೀಗ ಅಕ್ಕಿ ಕೊಡ್ತಿಲ್ಲ ಅಂತಾ ಹೇಳ್ತಿದಾರೆ. ಭಾರತ ಸರ್ಕಾರ ಅಕ್ಕಿ ಎಲ್ಲಿ ಕೊಡ್ತಿದೆ. ಉತ್ತರ ಪ್ರದೇಶ, ಮಧ್ಯ ಪ್ರದೇಶದಲ್ಲಿ ಅಕ್ಕಿ ಕೇಳ್ತಿದ್ದಾರೆ. ನಾವು ಅಕ್ಕಿ ಕೊಡ್ತಿಲ್ಲ. ಇಷ್ಟು ಅಕ್ಕಿ ಸ್ಟಾಕ್ ಇರಬೇಕು ಅನ್ನೋ ನಿಯಮ ಇದೆ. ಹಾಗಾಗಿ ಅಕ್ಕಿ ಸ್ಟಾಕ್ ಇರಬೇಕು. ಭಾರತ ಸರ್ಕಾರ ಕೊಟ್ರೆ ನಾವ ಕೊಡ್ತೀವಿ ಅಂತಾ ಹೇಳಬೇಕಿತ್ತು" ಎಂದು ವಾಗ್ದಾಳಿ ನಡೆಸಿದರು.
'ಸರ್ವಾಧಿಕಾರದ ಪ್ರತೀಕ':ಸಾಮಾಜಿಕ ಜಾಲತಾಣದ ಮೇಲೆ ಸರ್ಕಾರದ ಹದ್ದಿನ ಕಣ್ಣು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು "ಮೋದಿ ಅವರ ಬಗ್ಗೆ ಬಾಯಿಗೆ ಬಂದ ಹಾಗೆ ಸೋಶಿಯಲ್ ಮೀಡಿಯಾದಲ್ಲಿ ಬೈದಿದ್ದಾರೆ. ಸರ್ಕಾರದ ವಿರುದ್ಧ ಮಾತನಾಡಿದರೆ ಕ್ರಮ ಅನ್ನೋದು ಸರ್ವಾಧಿಕಾರದ ಪ್ರತೀಕ. ಇದೆಲ್ಲ ನಡೆಯಲ್ಲ. ಇಂದಿರಾ ಗಾಂಧಿ ಎಮರ್ಜೆನ್ಸಿ ಕಾಲ ಹೋಗಿದೆ ಸಿದ್ದರಾಮಯ್ಯನವರೇ. ಇದು ಸಿದ್ದರಾಮಯ್ಯನವರ ಸರ್ವಾಧಿಕಾರಿ, ಹಿಟ್ಲರ್ ಪ್ರವೃತಿ. ಇದನ್ನು ಬಿಡಿ, ಜನ ನಿಮಗೆ ತೀರ್ಪು ಕೊಟ್ಟಿದ್ದಾರೆ. ವಿನಮ್ರತೆಯಿಂದ ಮಾತನಾಡಿ" ಎಂದು ಜೋಶಿ ಸಲಹೆ ನೀಡಿದರು.
ವಿದ್ಯುನ್ಮಾನ ಮತಯಂತ್ರ (EVM) ರೀತಿ ನಮ್ಮ ಯೋಜನೆಗಳ ಜಾರಿಗೆ ಬೇಕಾಗಿರುವ ಯಂತ್ರಗಳ ಸರ್ವರ್ ಹ್ಯಾಕ್ ಅನ್ನು ಕೇಂದ್ರ ಸರ್ಕಾರ ಮಾಡಿದೆ ಎಂಬ ಸಚಿವ ಸತೀಶ್ ಜಾರಕಿಹೊಳಿ ಅವರ ಹೇಳಿಕೆ ಜೋಕ್ ಎಂದ ಕೇಂದ್ರ ಸಚಿವ ಜೋಶಿ, "ಮಂತ್ರಿಗಳೆಲ್ಲ ಹೀಗೆ ಮಾತಾಡ್ತಾರೆ ಅಂದ್ರೆ ಹೇಗೆ?. ಸೀರಿಯಸ್ ಇಲ್ಲದೆ ಅಕ್ಕಿ ವಿಷಯದಲ್ಲಿ ಮಾತಾಡ್ತಾರೆ. ಈ ವಿಷಯದಲ್ಲೂ ಹಾಗೆ ಮಾತನಾಡುತ್ತಿದ್ದಾರೆ. ಜಾರಕಿಹೊಳಿ ಇವಿಎಂ ಬಗ್ಗೆ ಮಾತನಾಡ್ತಾರೆ. ಚುನಾವಣಾ ಆಯೋಗ ಜಾರಕಿಹೊಳಿ ಮೇಲೆ ಕ್ರಮ ಕೈಗೊಳ್ಳಬೇಕು. ಆಯೋಗ ಇವಿಎಂ ಫೇಲ್ ಆಗೋ ಬಗ್ಗೆ ಸ್ಪಷ್ಟವಾಗಿ ಹೇಳಿದೆ. ನಾನು ಚುನಾವಣೆ ಆಯೋಗಕ್ಕೆ ಜಾರಕಿಹೊಳಿ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯ ಮಾಡ್ತೀನಿ. ಸುಮ್ನೆ ಹುಚ್ಚರ ರೀತಿ ಮಾತನಾಡಬೇಡಿ. ಸಿದ್ದರಾಮಯ್ಯ, ಜಾರಕಿಹೊಳಿ ಅವರೇ 135 ಸೀಟ್ ಸಿಕ್ಕಿದ್ದು ಇವಿಎಂನಿಂದ ಇದು ನೆನಪಿರಲಿ ಎಂದರು.