ಹುಬ್ಬಳ್ಳಿ:ಕೇಂದ್ರ ಸಚಿವ ಸುರೇಶ್ ಅಂಗಡಿಯವರ ಬಾಂಧವ್ಯ ಬೆಳಗಾವಿಯಿಂದ ಹುಬ್ಬಳ್ಳಿವರೆಗೂ ಬೆಸೆದುಕೊಂಡಿದೆ. ವಾಣಿಜ್ಯ ನಗರಿಯ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಪರಿಣಾಮವಾಗಿ ಅವರು ಜಗದೀಶ್ ಶೆಟ್ಟರ್ ಅವರೊಂದಿಗೆ ನೆಂಟಸ್ಥಿಕೆಯನ್ನು ಬೆಳೆಸಿದ್ದರು.
ಸುರೇಶ್ ಅಂಗಡಿಯವರು ಸದ್ಗುರು ಸಿದ್ಧಾರೂಢರ ಪರಮಭಕ್ತರಾಗಿದ್ದು, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗುತ್ತಿದಂತೆ ಬೆಳ್ಳಂಬೆಳಗ್ಗೆ ಬಂದು ಸಿದ್ದಾರೂಢ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ಹೋಗಿದ್ದರು. ಅಲ್ಲದೆ ಇತ್ತೀಚೆಗಷ್ಟೇ ಹುಬ್ಬಳ್ಳಿಯ ರೈಲ್ವೆ ನಿಲ್ದಾಣಕ್ಕೆ ಶ್ರೀ ಸಿದ್ಧಾರೂಢ ಸ್ವಾಮೀಜಿ ಹೆಸರಿಡುವ ಮೂಲಕ ಭಕ್ತಿ ಸಮರ್ಪಿಸಿದ್ದರು. ಬಹುದಿನಗಳ ಬೇಡಿಕೆಯನ್ನು ಈಡೇರಿಸುವ ಮೂಲಕ ಹುಬ್ಬಳ್ಳಿಯ ಜನಮನ್ನಣೆ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಹುಬ್ಬಳ್ಳಿಗೆ ಹಲವಾರು ಬಾರಿ ಭೇಟಿ ನೀಡಿದಾಗಲೂ ಸದ್ಗುರು ಸಿದ್ಧಾರೂಢ ಮಠಕ್ಕೂ ಭೇಟಿ ನೀಡಿ ದರ್ಶನ ಪಡೆಯುತ್ತಿದ್ದ ಸುರೇಶ್ ಅಂಗಡಿಯವರು ಹುಬ್ಬಳ್ಳಿಯೊಂದಿಗೆ ಅಪಾರ ನಂಟನ್ನು ಹೊಂದಿದ್ದರು. ಸುರೇಶ್ ಅಂಗಡಿ ಅವರು ತಮ್ಮ ರಾಜಕೀಯ ಹಾಗೂ ಕೌಟುಂಬಿಕ ಜೀವನದ ಪ್ರತಿಯೊಂದು ಬೆಳವಣಿಗೆಯಲ್ಲಿಯೂ ಕೂಡ ಸಿದ್ದಾರೂಢರನ್ನು ಸ್ಮರಿಸುತ್ತಿದ್ದರು. ನಾಮಪತ್ರ ಸಲ್ಲಿಕೆಯ ಮುನ್ನ ಸಿದ್ದಾರೂಢರ ಪ್ರಸಾದ ಪಡೆದುಕೊಂಡು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದರು ಎಂಬುವುದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ.
ಧಾರವಾಡ-ಬೆಳಗಾವಿ ಹೊಸ ರೈಲು ಮಾರ್ಗ ಮಂಜೂರು, ರೈಲ್ವೆ ಮ್ಯೂಸಿಯಂ, ಎರಡನೇ ಪ್ರವೇಶ ದ್ವಾರ ಉದ್ಘಾಟನೆ, ಬಹುತೇಕ ರೈಲ್ವೆ ಮಾರ್ಗಕ್ಕೆ ಚಾಲನೆ ಹಾಗೂ ಕೋವಿಡ್ ನಿಯಂತ್ರಣಕ್ಕೆ ರೈಲ್ವೆ ಐಸೋಲೇಷನ್ ಕೋಚ್ ನಿರ್ಮಾಣದಂತಹ ಅದೆಷ್ಟೋ ಜನಪರ ಯೋಜನೆಯನ್ನು ಕೈಗೆತ್ತಿಕೊಂಡ ಕೀರ್ತಿ ಸುರೇಶ್ ಅಂಗಡಿ ಅವರಿಗೆ ಸಲ್ಲುತ್ತದೆ.