ಹುಬ್ಬಳ್ಳಿ:ಬ್ಲಾಕ್ ಫಂಗಸ್ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡಿದೆ. ಫಂಗಸ್ ಬಂದಂತೆ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಹೇಳಿದರು.
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಮಾತನಾಡಿದ ಅವರು, ಬ್ಲಾಕ್ ಫಂಗಸ್ ಹತೋಟಿಗೆ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ. ಫಂಗಸ್ ಚಿಕಿತ್ಸೆಗೆ ಅವಶ್ಯವಿರುವ 14 ಸಾವಿರ ವೇಲ್ಸ್ ಔಷಧ ದೇಶದಲ್ಲಿ ಉತ್ಪಾದನೆಯಾಗುತ್ತಿದೆ. ಇದರಲ್ಲಿ ರಾಜ್ಯಕ್ಕೂ ಔಷಧ ಕಳುಹಿಸಿಕೊಡುವುದಾಗಿ ಕೇಂದ್ರ ಸಚಿವ ಸದಾನಂದಗೌಡ ಹೇಳಿದ್ದಾರೆ ಎಂದರು.
ಫಂಗಸ್ ಬಾಧೆಗೊಳಗಾದ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು. ಬ್ಲಾಕ್, ವೈಟ್ ಫಂಗಸ್ ಅಂತಿಲ್ಲ. ಫಂಗಸ್ ತಜ್ಞರನ್ನೊಳಗೊಂಡ ಐವರ ಸಮಿತಿ ರಚಿಸಲಾಗಿದೆ. ಫಂಗಸ್ ಇನ್ಫೆಕ್ಷನ್ಗೆ ಕಾರಣವಾದ ಅಂಶಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಸಮಿತಿ ಪ್ರಾಥಮಿಕ ವರದಿಯನ್ನೂ ನೀಡಿದೆ. ಹ್ಯುಮಿಡಿಫೈಯರ್ಗಳಿಗೆ ಡಿಸ್ಟಿಲ್ಡ್ ನೀರಿನ ಬದಲಿಗೆ ನಳದ ನೀರು ಬಳಕೆ ಮಾಡಿರೋದು ಬೆಳಕಿಗೆ ಬಂದಿದೆ. ಅದರ ಜತೆಗೆ ಸ್ಟಿರಾಯ್ಡ್ ಬಳಕೆ ಮತ್ತಿತರ ಕಾರಣಗಳಿಂದ ಫಂಗಸ್ ಬೆಳವಣಿಗೆಯಾಗಿದೆ. ಸಮಿತಿ ಕೆಲವೊಂದು ಸಲಹೆಗಳನ್ನ ನೀಡಿದೆ. ಅದರ ಪ್ರಕಾರ ಫಂಗಸ್ ನಿಯಂತ್ರಣಕ್ಕೆ, ರೋಗಿಗಳನ್ನು ಗುಣಪಡಿಸೋಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.