ಧಾರವಾಡ: ರಾಮ ಮರ್ಯಾದಾ ಪುರುಷೋತ್ತಮ. ಜೀವನದಲ್ಲಿ ಉತ್ಕೃಷ್ಟ ಗುಣ ಹೊಂದಿದವರು ಶ್ರೀರಾಮ. ನಮ್ಮ ದೇಶಕ್ಕೆ ಪ್ರತಿಷ್ಠಿತ, ಗೌರವಯುತ, ಐತಿಹಾಸಿಕ ವ್ಯಕ್ತಿ. ಇಂತಹ ಮಂದಿರ ಉದ್ಘಾಟನೆ ಬಹಳ ಒಳ್ಳೆಯದು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್. ಆರ್ ಹಿರೇಮಠ ಅವರು ಹೊಗಳಿದ್ದಾರೆ.
ಧಾರವಾಡದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನಬದ್ಧ ಆಡಳಿತ ಮಾಡುವ ಸರ್ಕಾರ ಮತ್ತು ಧರ್ಮ ಮಿಶ್ರಿತ ಆಗಬಾರದು. ಪ್ರಜಾಪ್ರಭುತ್ವದಲ್ಲಿ ಇದನ್ನೇ ಹೇಳಲಾಗಿದೆ. ಪ್ರಧಾನಿ ಹುದ್ದೆ ಸಂವಿಧಾನದ ಶಕ್ತಿಯುತ ಸ್ಥಾನ. ಅವರು ಸರ್ಕಾರ ಮತ್ತು ಧರ್ಮದಲ್ಲಿ ಬಹಳ ಅಂತರ ಕಾಪಾಡಿಕೊಳ್ಳಬೇಕು ಎಂದರು.
ಸೋಮೇಶ್ವರ ದೇವಸ್ಥಾನ ಪುನರ್ ನಿರ್ಮಾಣ ಮಾಡಿದ್ದರು. ಆಗ ಪ್ರಧಾನಿಯಾದವರು ಅಲ್ಲಿ ಹೋಗಿರಲಿಲ್ಲ. ಧರ್ಮದ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆದರೆ ಅದು ನಮ್ಮ ಮನೆ, ಹೃದಯ ಮತ್ತು ನೈತಿಕ ನೆಲೆಗಟ್ಟಿನ ಆಧಾರಸ್ಥಂಭದಲ್ಲಿರಬೇಕು. ಆದರೆ, ಸಂವಿಧಾನಿತ ಸ್ಥಾನದಲ್ಲಿ ಧರ್ಮ ಇರಬಾರದು. ಅಯೋಧ್ಯೆಗಾಗಿ ಟ್ರಸ್ಟ್ ಮಾಡಿದ್ದಾರೆ. ಆ ಟ್ರಸ್ಟ್ಗೆ ಸಮಗ್ರವಾಗಿ ಎಲ್ಲ ಬಿಡಬೇಕು. ನಾವು ಹಿಂದೂ ಧರ್ಮ ಎತ್ತಿ ಹಿಡಿಯುವರು ಅಂತಾ ಇವರು ಹೇಳುತ್ತಾರೆ. ಆದರೆ ಇವರು ಧರ್ಮ ಎತ್ತಿ ಹಿಡಿಯುವ ರೀತಿ ಸರಿಯಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಯಾವುದೇ ದೃಷ್ಟಿಯಿಂದ ಧರ್ಮವನ್ನು ರಾಜಕೀಯವಾಗಿ ದುರ್ಬಳಕೆ ಮಾಡಬಾರದು. ಮಂದಿರ ಸಂಪೂರ್ಣವಾಗಿ ಮುಗಿದಿಲ್ಲ. ಈಗ ಉದ್ಘಾಟನೆ ಮಾಡುವ ಅವಸರ ಏನಿದೆ?. ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆ ಇದೆ. ಅದಕ್ಕಾಗಿ ಹೀಗೆ ಮಾಡಿದ್ದಾರೆ. ವಿರೋಧ ಪಕ್ಷ ಕಾಂಗ್ರೆಸ್ ಸಹ ಸರಿಯಾಗಿಲ್ಲ. ಕಾಂಗ್ರೆಸ್ ಮಾಡಬಾರದ್ದೆಲ್ಲ ಮಾಡಿದ ಕಾರಣಕ್ಕೆ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಪ್ರಧಾನಿ 11 ದಿನ ಉಪವಾಸ ಮಾಡುತ್ತಿದ್ದಾರೆ. ಅವರಿಗೆ ಅಂತರಾಳವಿದ್ದರೆ ಸುಳ್ಳು ಹೇಳಬಾರದು. ಅನ್ಯರಿಗೆ ಅಸಹ್ಯ ಪಡಬಾರದು. ಆದರೆ ವಿರೋಧಿಗಳನ್ನು ಲೋಕಸಭೆಯಲ್ಲಿ ಏನು ಮಾಡಿದರು ಗೊತ್ತಲ್ವಾ? ಅವರು ಖಾವಿ ಬಟ್ಟೆ ಹಾಕಿಕೊಳ್ಳಲಿ. ಆ ಮೂಲಕ ಸ್ವರ್ಗ ಕಾಣಲಿ. ಆದರೆ ರಾಮನ ಹೆಸರಿನಲ್ಲಿ ಇದೆಲ್ಲ ಮಾಡುತ್ತಿದ್ದಾರೆ. ರಾಮನ ಭಕ್ತರಾಗಿದ್ದರೆ ರಾಮನಂತೆ ನಡೆಯಬೇಕು. ರಾಜಕೀಯವಾಗಿ ಧರ್ಮ ಬಳಸಬಾರದು ಎಂದರು.