ಹುಬ್ಬಳ್ಳಿ:ಅಕ್ರಮ ಗಣಿಗಾರಿಕೆ ಕಿಂಗ್ ಫಿನ್ ಗಾಲಿ ಜನಾರ್ದನ ರೆಡ್ಡಿ ಈಗ ಮತ್ತೊಂದು ಷಡ್ಯಂತ್ರಕ್ಕೆ ಮುಂದಾಗಿದ್ದಾರೆ. ಗಣಿಗಾರಿಕೆಗೆ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಅನುಮತಿ ನೀಡಿದ್ದು, ಈ ಬಗ್ಗೆ ಸುಪ್ರೀಂಕೋರ್ಟ್ ಸೂಕ್ತ ನಿರ್ಧಾರದ ಮೂಲಕ ಇಂತಹ ಮಾಫಿಯಾಗೆ ಬ್ರೇಕ್ ಹಾಕುವ ಕಾರ್ಯವನ್ನು ಮಾಡಬೇಕು ಎಂದು ಎಂದು ಸಮಾಜ ಪರಿವರ್ತನಾ ಸಮುದಾಯದ ಅಧ್ಯಕ್ಷ ಎಸ್ಆರ್ ಹಿರೇಮಠ ಹೇಳಿದರು.
ನಗರದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಆಂಧ್ರ ಪ್ರದೇಶದಲ್ಲಿ ಗಾಲಿ ಜನಾರ್ದನ ರೆಡ್ಡಿ ಮತ್ತೆ ಅಕ್ರಮ ಗಣಿಗಾರಿಕೆ ಆರಂಭಿಸಲು ಮುಂದಾಗಿದ್ದಾರೆ. ಅದಕ್ಕೆ ಅಲ್ಲಿಯ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸಹ ಒಪ್ಪಿಗೆ ನೀಡಿದ್ದು ಆತಂಕದ ಸಂಗತಿ. ಯಾವುದೇ ಕಾರಣಕ್ಕೂ ಅಕ್ರಮ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದರು.
ಅಕ್ರಮ ಗಣಿಗಾರಿಕೆ ನಿಯಂತ್ರಣಕ್ಕೆ ರಾಜ್ಯದಲ್ಲಿ ಯಾವೆಲ್ಲ ಕಾನೂನು ಕ್ರಮ ಕೈಗೊಳ್ಳಲಾಗಿದೆಯೋ, ಅವುಗಳನ್ನು ಆಂಧ್ರ ಪ್ರದೇಶದಲ್ಲೂ ಕೈಗೊಳ್ಳಬೇಕು. ಈ ಕುರಿತು ಸುಪ್ರೀಂಕೋರ್ಟ್ನಲ್ಲಿ ಸಮಾಜ ಪರಿವರ್ತನಾ ಸಮುದಾಯ ಹೋರಾಟ ಮುಂದುವರಿಸಲಿದೆ. ಕರ್ನಾಟಕದಲ್ಲಿ ಕಬ್ಬಿಣ ಅದಿರು ಗಣಿಗಾರಿಕೆ ಮಿತಿಯನ್ನು ಸಂಪೂರ್ಣ ಸಡಿಲಿಸಬೇಕು ಎಂದು ಕೇಂದ್ರ ಉನ್ನತಾಧಿಕಾರ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದ್ದು ಸ್ವಾಗತಾರ್ಹ ಎಂದು ತಿಳಿಸಿದರು.