ಹುಬ್ಬಳ್ಳಿ: ರಾಜ್ಯದಲ್ಲಿ ಕಾಂಗ್ರೆಸ್ನವರ ಕೊಡುಗೆ ಶೂನ್ಯ. ಅವರಿಗೆ ಮತ ಕೇಳುವ ಯಾವುದೇ ನೈತಿಕತೆ ಇಲ್ಲ. ಮೈತ್ರಿ ಸರ್ಕಾರ ಬೀಳುತ್ತೆ ಅಂತಾ ನಾವು ಹೇಳಿಲ್ಲ, ನಿಮ್ಮ ಶಾಸಕರೇ ಹೇಳುತ್ತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ.
ಉಮೇಶ್ ಜಾಧವ್ 50 ಕೋಟಿ ರೂ.ಗೆ ಡೀಲ್ ಆಗಿದ್ದಾರೆ ಎಂಬ ಕಾಂಗ್ರೆಸ್ನ ಆರೋಪದ ಬಗ್ಗೆ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಮಾಜಿ ಶಾಸಕ ಉಮೇಶ್ ಜಾಧವ್ ಶ್ರೀಮಂತ ಕುಟುಂಬದಿಂದ ಬಂದವರು. ಅವರಿಗೆ ದುಡ್ಡಿನ ಆಮಿಷಕ್ಕೆ ಒಳಗಾಗುವ ದರಿದ್ರ ಪರಿಸ್ಥಿತಿ ಬಂದಿಲ್ಲ ಎಂದರು.
ಕಾಂಗ್ರೆಸ್ ಮುಖಂಡರ ಆರೋಪಕ್ಕೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿದ ಸಂಸದೆ ಶೋಭಾ ಕರಂದ್ಲಾಜೆ ಮೈತ್ರಿ ಸರ್ಕಾರದ ಒಳ ಜಗಳದಿಂದಾಗಿ ಅವರು ಬಿಜೆಪಿಗೆ ಬಂದಿದ್ದಾರೆ. ಕಾಂಗ್ರೆಸ್ನವರು ಇಲ್ಲಿಗೆ ಬಂದು ನಮ್ಮ ಪಕ್ಷದ ಕಾರ್ಯಕರ್ತರನ್ನು ಖರೀದಿ ಮಾಡಲು ನಿಂತಿದ್ದಾರೆ. ಅವರು ಖರೀದಿ ಮಾಡಿ ಗೆಲ್ಲುವ ಭ್ರಮೆಯಲ್ಲಿದ್ದಾರೆ. ಆದರೆ, ಅವರ ದುಡ್ಡಿಗೆ ಇಲ್ಲಿ ಯಾರೂ ಖರೀದಿಗೆ ಸಿದ್ಧರಿಲ್ಲ ಎಂದು ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ಹರಿಹಾಯ್ದರು.
ಮೈತ್ರಿ ಸರ್ಕಾರದ ಶಾಸಕರು ಯಾವಾಗ ರಾಜೀನಾಮೆ ಕೊಡ್ತಾರೋ ಆವಾಗ ಅವರನ್ನ ಮಾತನಾಡಿಸುತ್ತೇವೆ. ನಾವು ಮೈತ್ರಿ ಸರ್ಕಾರವನ್ನು ಬೀಳಿಸುತ್ತೇವೆ ಅಂತ ಎಲ್ಲಿಯೂ ಹೇಳಿಲ್ಲ. ಅವರವರೇ ಕಚ್ಚಾಡಿಕೊಳ್ಳುತ್ತಿ ದ್ದಾರೆ. ಅವರ ಕಚ್ಚಾಟದಿಂದಲೇ ಸರ್ಕಾರ ಬೀಳುತ್ತೆ ಎಂದು ಪುನರುಚ್ಚರಿಸಿದರು.