ಧಾರವಾಡ: ಜಿಲ್ಲೆಯಲ್ಲಿ ಡಿ. 22 ಮತ್ತು 27ರಂದು ಎರಡು ಹಂತದಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆ ಕಾರ್ಯವು ಡಿಸೆಂಬರ್ 30ರಂದು ಬೆಳಗ್ಗೆ 8 ಗಂಟೆಯಿಂದ ಆಯಾ ತಾಲೂಕಿನ ಕೇಂದ್ರ ಸ್ಥಾನದಲ್ಲಿ ನಿಗದಿಪಡಿಸಿರುವ ಸ್ಥಳಗಳಲ್ಲಿ ನಡೆಯಲಿದ್ದು, 7 ತಾಲೂಕಿನ ಮತ ಎಣಿಕಾ ಕೇಂದ್ರಗಳಲ್ಲಿ 744 ಸಿಬ್ಬಂದಿ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಮುಕ್ತಾಯವಾಗುವವರೆಗೆ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಮತ ಎಣಿಕೆಗಾಗಿ 7 ಮತ ಎಣಿಕೆ ಕೇಂದ್ರಗಳನ್ನು ಗುರುತಿಸಲಾಗಿದ್ದು, 248 ಕೌಂಟಿಂಗ್ ಸುಪರ್ವೈಸರ್ ಮತ್ತು 496 ಕೌಂಟಿಂಗ್ ಸಹಾಯಕರಿಗೆ ಮತ ಎಣಿಕೆ ತರಬೇತಿ ನೀಡಿ ನೇಮಕ ಮಾಡಿಕೊಳ್ಳಲಾಗಿದೆ ಎಂದರು.
ಧಾರವಾಡ ತಾಲೂಕಿನ 34 ಗ್ರಾಮ ಪಂಚಾಯತಿಗಳ ಚುನಾವಣೆಯ ಮತಗಳ ಎಣಿಕೆಯು ಧಾರವಾಡ ನಗರದ ಬಾಸೆಲ್ ಮಿಷನ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ನಡೆಯಲಿದ್ದು, 68 ಜನ ಕೌಂಟಿಂಗ್ ಸುಪರ್ವೈಸರ್ ಮತ್ತು 136 ಕೌಂಟಿಂಗ್ ಸಹಾಯಕರನ್ನು ಈ ಕಾರ್ಯಕ್ಕಾಗಿ ನೇಮಿಸಲಾಗಿದೆ.
ಅಳ್ನಾವರ ತಾಲೂಕಿನ 4 ಗ್ರಾಮ ಪಂಚಾಯತಿಗಳ ಚುನಾವಣೆಯ ಮತಗಳ ಏಣಿಕೆಯು ಅಳ್ನಾವರ ಪಟ್ಟಣದ ಕಾಶೆನಟ್ಟಿ ರಸ್ತೆಯ ಜ್ಯೋತಿ ನಗರದಲ್ಲಿ ಬರುವ ಸೆಂಟ್ ಥೆರೆಸಾ ಸಂಯುಕ್ತ ಪದವಿ ಪೂರ್ವ ಕಾಲೇಜು ಮತ್ತು ಸೆಂಟ್ ಥೆರೆಸಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆಯಲಿದೆ.