ಹುಬ್ಬಳ್ಳಿ: ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಉಪಮೇಯರ್ ಆಯ್ಕೆ ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾದ ಬೆನ್ನಲ್ಲೇ ನಾಲ್ವರಲ್ಲಿ ಯಾರು ಮೇಯರ್? ಎಂಬುವಂತ ಕುತೂಹಲ ಕೆರಳಿಸಿತ್ತು. ಇದೀಗ ಮೆಯರ್ ಸ್ಥಾನದಲ್ಲಿ ತಮ್ಮ ಬೆಂಬಲಿಗನನ್ನು ಕಣಕ್ಕಿಳಿಸುವ ಮೂಲಕ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮೇಲುಗೈ ಸಾಧಿಸಿದ್ದಾರೆ.
ನಿನ್ನೆ ಖಾಸಗಿ ಹೊಟೆಲ್ನಲ್ಲಿ ನಡೆದ ಸಭೆಯಲ್ಲಿ ನಾಲ್ವರ ಹೆಸರು ಅಂತಿಮಗೊಂಡಿದ್ದು, ಅರವಿಂದ ಬೆಲ್ಲದ ಕ್ಷೇತ್ರದಿಂದ ವಿಜಯಾನಂದ ಶೆಟ್ಟಿ, ಅಮೃತ ದೇಸಾಯಿ ಕ್ಷೇತ್ರದಿಂದ ಈರೇಶ್ ಆಂಚಟಗೇರಿ, ಜಗದೀಶ್ ಶೆಟ್ಟರ್ ಕ್ಷೇತ್ರದಿಂದ ವೀರಣ್ಣ ಸವಡಿ, ಪೂರ್ವ ವಿಧಾನಸಭಾ ಕ್ಷೇತ್ರದಿಂದ ಶಿವು ಮೆಣಸಿನಕಾಯಿ ಹೆಸರು ಅಂತಿಮಗೊಂಡಿತ್ತು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಬೆಂಬಲಿಗ ಈರೇಶ್ ಅಂಚಟಗೇರಿ ಹೆಸರು ಅಂತಿಮಗೊಂಡಿದೆ. ಧಾರವಾಡದ ವಾರ್ಡ್ ನಂ.4ರ ಈರೇಶ್ ಅಂಚಟಗೇರಿ ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಸ್ಪರ್ಧಿಸುವುದು ಪಕ್ಕಾ ಆಗಿದ್ದು, ಹುಬ್ಬಳ್ಳಿಯ 44ನೇ ವಾರ್ಡ್ ಸದಸ್ಯೆ ಉಮಾ ಮುಕುಂದ ಉಪಮೇಯರ್ ಆಗಿ ಸ್ಪರ್ಧೆಗೆ ಇಳಿಯಲಿದ್ದಾರೆ. ಒಟ್ಟಿನಲ್ಲಿ ಮೇಯರ್, ಉಪ ಮೇಯರ್ ಸ್ಥಾನಕ್ಕೆ ಇಳಿದಿರುವ ಇಬ್ಬರೂ ಜೋಶಿ ಬೆಂಬಲಿಗರಾಗಿದ್ದು, ನಾಲ್ವರು ನಾಯಕರ ಪೈಕಿ ಕೇಂದ್ರ ಸಚಿವ ಜೋಶಿ ಮೇಲುಗೈ ಸಾಧಿಸಿದಂತಾಗಿದೆ.