ಧಾರವಾಡ:ರಾಜಸ್ಥಾನ ಬಿಜೆಪಿಯಲ್ಲಿ ಭಿನ್ನಮತ ವಿಚಾರ ಸುಳ್ಳು. ವಸುಂಧರಾ ರಾಜೇ ಸೇರಿ ಎಲ್ಲರೂ ನನ್ನ ಸಂಪರ್ಕದಲ್ಲಿದ್ದಾರೆ. ಬಿಜೆಪಿ ರಾಷ್ಟ್ರೀಯ ನಾಯಕರ ನೇತೃತ್ವದಲ್ಲಿ ಸಿಎಂ ಸ್ಥಾನದ ತೀರ್ಮಾನ ಆಗುತ್ತದೆ. ಈ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಸುವರ್ಣ ವಿಧಾನಸೌಧದ ಸಾರ್ವಕರ್ ಫೋಟೋ ವಿವಾದ ವಿಚಾರಕ್ಕೆ ಮಾತನಾಡಿದ ಅವರು, ಸ್ಪೀಕರ್ ಯು.ಟಿ.ಖಾದರ್ ನಡೆಯನ್ನು ಜೋಶಿ ಅಭಿನಂದಿಸಿದರು. ಸಾರ್ವಕರ್ ಫೋಟೋ ವಿಷಯದಲ್ಲಿ ವಿಧಾನಸಭೆ ಸ್ಪೀಕರ್ ನಿಲುವಿಗೆ ಅಭಿನಂದಿಸುತ್ತೇನೆ. 'ನಾನು ಕಿತ್ತೊಗೆಯಲು ಬಂದಿಲ್ಲ, ಜೋಡಿಸಲು ಬಂದಿದ್ದೇನೆ' ಎಂದಿದ್ದಾರೆ. ಈ ನಿಲುವು ಹಾಗೆಯೇ ಇರಬೇಕು. ಆಗ ಸದನ ಯಾವುದೇ ವಿವಾದ ಇಲ್ಲದೇ ನಡೆಯುತ್ತದೆ. ವಿಚಾರಧಾರೆಯನ್ನು ಒಪ್ಪುವುದು, ಬಿಡುವುದು ನಿಮಗೆ ಬಿಟ್ಟಿದ್ದು. ಆದರೆ ಸಾವರ್ಕರ್ ವಿಚಾರಧಾರೆ ಅನುಸರಿಸುವವರು ಅನೇಕರಿದ್ದಾರೆ. ಹೀಗಾಗಿ ಅಂಥ ವಿಚಾರಧಾರೆಯವರ ಫೋಟೋ ಕಿತ್ತೊಗೆಯುತ್ತೇನೆ ಎನ್ನುವುದು ಅಹಂಕಾರ. ಸನಾತನ ಧರ್ಮದ ವಿರುದ್ಧ ಉದಯನಿಧಿ ಸ್ಟಾಲಿನ್ ಹೇಳಿಕೆ ಕೊಟ್ಟಿದ್ದರು. ಅದನ್ನು ಕಾಂಗ್ರೆಸ್ ಬೆಂಬಲಿಸಿತ್ತು. ಅದರ ಪರಿಣಾಮವನ್ನು ಮೂರು ರಾಜ್ಯದಲ್ಲಿ ಅನುಭವಿಸಿದ್ದಾರೆ. ಈಗ ಪ್ರಿಯಾಂಕ್ ಖರ್ಗೆ ಅಂತಹದ್ದೇ ಮಾತುಗಳನ್ನು ಹೇಳುತ್ತಿದ್ದಾರೆ. ಇದೇ ರೀತಿ ಮುಂದುವರೆದರೆ ಜನ ಇನ್ನೂ ಹೆಚ್ಚು ಇವರನ್ನು ಅರ್ಥಮಾಡಿಕೊಳ್ಳುತ್ತಾರೆ. ನೆಹರೂ ವಿಚಾರಗಳ ಬಗ್ಗೆ ನಮಗೆ ಭಿನ್ನಾಭಿಪ್ರಾಯ ಇದೆ. ಹಾಗಂತ ನಾವು ನೆಹರೂ ಫೋಟೊ ತೆಗೆಯುತ್ತೇನೆ ಎನ್ನಲಾಗುತ್ತದೆಯೇ?. ನೆಹರು ಅವರನ್ನು ಒಪ್ಪುವವರು ಅನೇಕರಿದ್ದಾರೆ. ಹೀಗಾಗಿ ಫೋಟೋ ತೆಗೆಯುವ ವಿಚಾರ ಸರಿಯಲ್ಲ ಎಂದರು.