ಹುಬ್ಬಳ್ಳಿ :ಕಾಂಗ್ರೆಸ್ ಸರ್ಕಾರದ ಜನಪ್ರಿಯತೆ ಬಹಳ ದಿನ ಉಳಿಯಲ್ಲ. ಅಕ್ಕಿ ವಿಷಯವಾಗಿ ಕಾಂಗ್ರೆಸ್ ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡಬೇಕಿತ್ತು. ಇದೀಗ ಅಕ್ಕಿ ಬರಲ್ಲ ಅಂತಾ ಕುಂಟು ನೆಪ ಹೇಳುತ್ತಿದ್ದಾರೆ. ಇದು ಕಾಂಗ್ರೆಸ್ ಗ್ಯಾರಂಟಿಯಿಂದ ಹಿಂದೆ ಹೋದಂತೆ ಅರ್ಥ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.
ಬಿಜೆಪಿಯವರೇ ಅಕ್ಕಿ ಕೊಡಿಸಿ ಅಂದ್ರೆ ಸರಿಯಲ್ಲ: ಛಬ್ಬಿ ಗ್ರಾಮದಲ್ಲಿ ನೂತನ ಪ್ರೌಢಶಾಲೆ ಕಟ್ಟಡ ಭೂಮಿ ಪೂಜೆ ಮಾಡಿ ಮಾತನಾಡಿದ ಅವರು, ಇದೀಗ ಛತ್ತೀಸ್‌ಘಡದಿಂದ ಅಕ್ಕಿ ತರ್ತೀವಿ ಅಂತಿದ್ದಾರೆ. ನಮಗೆ ಬಡ ಜನರಿಗೆ ಒಳ್ಳೆಯದು ಆದ್ರೆ ಸಾಕು. ಎಲ್ಲಿಂದ ತಗೋಬೇಕು, ಹೇಗೆ ತಗೋಬೇಕು ಅನ್ನೋ ಪ್ರಶ್ನೆ. ರಾಜ್ಯದ ರೈತರು ಅಕ್ಕಿ ಕೊಡೋಕೆ ಮುಂದೆ ಬಂದ್ರೆ ಮೊದಲನೇ ಪ್ರಾಶಸ್ತ್ಯ ಅದನ್ನು ಖರೀದಿ ಮಾಡಬೇಕು. ಬಿಜೆಪಿಯವರೇ ಕೊಡಿಸಿ ಅನ್ನೋದು ಸರಿ ಅಲ್ಲ. ಹೆಚ್ಚುವರಿ 5 ಕೆಜಿ ಅಕ್ಕಿಗೆ ಎಷ್ಟು ಮೆಟ್ರಿಕ್ ಟನ್ ಅಕ್ಕಿ ಬೇಕು ಅಷ್ಟನ್ನು ಎಲ್ಲಾ ಕಡೆಯಿಂದ ಪಡೆದುಕೊಂಡು ಕೊಡುವಂತಹದ್ದು ಸರ್ಕಾರದ ಕರ್ತವ್ಯ. ಅಕಸ್ಮಾತ್ ಒಂದನೇ ತಾರೀಖಿಗೆ ಅಕ್ಕಿ ಕೊಡದೆ ಹೋದ್ರೆ ನಾವು ಪ್ರತಿಭಟನೆ ಮಾಡ್ತೀವಿ ಎಂದರು.
ರಾಜ್ಯದಲ್ಲಿ ಬರಗಾಲ ಇದೆ : ಮುಂದಿನ ಐದು ವರ್ಷದ ಅವಧಿಯವರೆಗೂ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದು ಅವರ ಆಪ್ತರು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಇತ್ತ ಅವರಿಗೆ ಗ್ಯಾರಂಟಿಗಳನ್ನು ಜಾರಿ ಮಾಡಲು ಆಗುತ್ತಿಲ್ಲ. ಕೇವಲ ಒಂದು ಭರವಸೆಯನ್ನು ಮಾತ್ರ ಜಾರಿಗೆ ತಂದಿದ್ದಾರೆ. ಇನ್ನೂ ನಾಲ್ಕು ಗ್ಯಾರಂಟಿಗಳ ಬಗ್ಗೆ ಮಾತನಾಡುತ್ತಿಲ್ಲ. ಅವರಿಗೆ ಗೊಂದಲಗಳಿವೆಯಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎಲ್ಲಕ್ಕಿಂತ ಮುಖ್ಯವಾಗಿ ಕಳೆದ ವಾರ ನಾನು ಮುಖ್ಯಮಂತ್ರಿ ಗಮನಕ್ಕೆ ತಂದಿದ್ದೇನೆ. ರಾಜ್ಯದಲ್ಲಿ ಬರಗಾಲ ಇದೆ. ಮಳೆ ನಿಂತಿದೆ, ಈ ವಾರ ಮಳೆ ಬರಲಿಲ್ಲ. ಹೀಗಾಗಿ ಮುಂಗಾರು ಸಂಪೂರ್ಣ ವಿಫಲವಾಗಿದೆ ಎಂದು ಬೊಮ್ಮಾಯಿ ಹೇಳಿದ್ರು.