ಹುಬ್ಬಳ್ಳಿ: ಒಂದೆಡೆ ರಾಜ್ಯ ಸರ್ಕಾರ ಆನ್ಲೈನ್ ಜೂಜು ನಿಷೇಧಕ್ಕೆ ಮುಂದಾಗುತ್ತಿದ್ದರೆ, ಇನ್ನೊಂದೆಡೆ ಆನ್ಲೈನ್ ಮಟ್ಕಾ ಎಗ್ಗಿಲ್ಲದೆ ಅವ್ಯಾಹತವಾಗಿ ನಡೆಯುತ್ತಿದೆ. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಂತೂ ಅದರ ಆರ್ಭಟ ಜೋರಾಗಿದ್ದು, ಬಹುತೇಕರು ಆನ್‌ಲೈನ್ ಮಟ್ಕಾ ವ್ಯಸನಿಗಳಾಗಿದ್ದಾರೆ.
ಸ್ಮಾರ್ಟ್ ಫೋನ್‍ಗಳು ಎಲ್ಲರ ಕೈಗೆ ಸುಲಭವಾಗಿ ಸಿಗುತ್ತಿದ್ದಂತೆ, ಆನ್‍ಲೈನ್ ಮಟ್ಕಾ ಸಹ ಹೆಚ್ಚು ಚಾಲ್ತಿಗೆ ಬರತೊಡಗಿದೆ. ಸಾಂಪ್ರದಾಯಿಕ ಮಟ್ಕಾಕ್ಕೆ ನಿರ್ದಿಷ್ಟ ಅಡ್ಡೆಗಳಿದ್ದಂತೆ ಇದಕ್ಕೆ ಯಾವುದೇ ಅಡ್ಡೆಗಳೂ ಇಲ್ಲ. ಅವರವರ ಸ್ಮಾರ್ಟ್ ಫೋನ್ಗಳೇ ಅಡ್ಡೆಯಾಗಿ ಪರಿಣಮಿಸಿವೆ. ತಾವಿದ್ದಲ್ಲಿಂದಲೇ ವಾಟ್ಸ್ಆ್ಯಪ್ ಮೂಲಕ ನಂಬರ್ ಕಳುಹಿಸಿ ಅದೃಷ್ಟದ ನಂಬರ್ ಗೇಮ್ಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಈ ಮೊದಲು ಟೀ ಅಂಗಡಿ, ಪಾನ್ ಶಾಪ್, ಕಿರಾಣಿ ಅಂಗಡಿಗಳಲ್ಲಿ ಮಟ್ಕಾ ನಂಬರ್ ಬರೆಸಿ, ಅದೃಷ್ಟ ಎದುರು ನೋಡುತ್ತಿದ್ದರು. ಅದು ಸಹ ಬೆಳಿಗ್ಗೆ(ಮುಂಬೈ ಮಟ್ಕಾ) ಮತ್ತು ಸಂಜೆ(ಕಲ್ಯಾಣಿ) ಎಂದು ದಿನಕ್ಕೆ ಎರಡು ಬಾರಿ ಮಾತ್ರ. ಈಗ ಅದು ಆನ್ಲೈನ್ ಆಗಿದ್ದರಿಂದ ಹಾಗೂ ದಿನದ 24 ಗಂಟೆಯೂ ನಂಬರ್ ಗೇಮ್ ಇರುವುದರಿಂದ ಜೂಜುಕೋರರು ಹೆಚ್ಚಿನ ಸಮಯ ಅಲ್ಲಿಯೇ ಕಳೆಯುತ್ತಿದ್ದಾರೆ. ಕಾರ್ಮಿಕರು, ಕೊಳೆಗೇರಿ ನಿವಾಸಿಗಳು, ಆಟೋ ಚಾಲಕರು, ದಿನಗೂಲಿ ನೌಕರರು, ಮಧ್ಯಮ ವರ್ಗದವರು ಈ ಆನ್‍ಲೈನ್ ಆಟಕ್ಕೆ ಸಿಲುಕಿ ಹಣ ಕಳೆದುಕೊಳ್ಳುತ್ತಿದ್ದಾರೆ.
ಹುಬ್ಬಳ್ಳಿಯಲ್ಲಿ ಹೆಚ್ಚಾಗುತ್ತಿದೆ ಆನ್ಲೈನ್ ಜೂಜು ಆನ್‍ಲೈನ್ ಮಟ್ಕಾ ಹತ್ತಾರು ಸ್ವರೂಪಗಳಲ್ಲಿದ್ದು, ಅನೇಕ ವೆಬ್‍ಸೈಟ್‍ಗಳನ್ನು ಹೊಂದಿವೆ. ವಿಭಿನ್ನ ರೀತಿಯ ಆಟಗಳಲ್ಲಿ ಜನರನ್ನು ಸೆಳೆದು ಅದರಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತವೆ. ವೆಬ್ಸೈಟ್ಲ್ಲಿ ಇರುವ ನಂಬರಗೆ ಕರೆ ಮಾಡಿ ನೋಂದಣಿ ಮಾಡಿಕೊಂಡ ಏಜೆಂಟ್(ಬೀಟರ್)ರು ಜನರಿಂದ(ಆಟ ಆಡುವವರಿಂದ) ಹಣ ಸಂಗ್ರಹಿಸಿ ನಂಬರ್(ಅಂಕಿ) ಪಡೆಯುತ್ತಾರೆ. ನಿರ್ದಿಷ್ಟ ವೆಬ್‍ಸೈಟ್‍ನಲ್ಲಿ ನಿಗದಿತ ಸಮಯಕ್ಕೆ ಸಂಖ್ಯೆಗಳು ಬರುತ್ತವೆ. ಗಂಟೆಗೊಮ್ಮೆ ಇಂತಹ ಆಟಗಳು ಸಹ ಅಲ್ಲಿ ನಡೆಯುತ್ತವೆ. ಇದಕ್ಕೆ ಕೂಡಲೇ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ಕಡಿವಾಣ ಹಾಕಬೇಕಿದೆ.