ಧಾರವಾಡ: ಬರುವ ಆಗಸ್ಟ್ 1ರಂದು ಬಕ್ರೀದ್ ಹಬ್ಬವಿದ್ದು, ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿಲ್ಲ. ಸರ್ಕಾರದ ಆದೇಶದಂತೆ ಮಸೀದಿಗಳಲ್ಲಿ ಪ್ರತಿಯೊಬ್ಬರು ಪ್ರಾರ್ಥನೆಗೆ ಬರುವಾಗ ಮಾಸ್ಕ್, ಸ್ಯಾನಿಟೈಸರ್ ಬಳಸಬೇಕು ಮತ್ತು ಪರಸ್ಪರ ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ ಹೇಳಿದರು.
ಅವರು ಪೊಲೀಸ್ ಹೆಡ್‍ಕ್ವಾರ್ಟಸ್‍ನ ದುರ್ಗಾದೇವಿ ದೇವಸ್ಥಾನ ಸಮುದಾಯ ಭವನದಲ್ಲಿ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ಜಿಲ್ಲಾ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
ಕೊರೊನಾ ವೈರಸ್ ಎಲ್ಲೆಡೆ ಹರಡುತ್ತಿದೆ. ಪೊಲೀಸ್ ಇಲಾಖೆ ಸಿಬ್ಬಂದಿ ಕೊರೊನಾ ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಇಲಾಖೆಯ ಇಬ್ಬರು ಪಿಎಸ್‍ಐ ಹಾಗೂ 15 ಜನ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಸಾರ್ವಜನಿಕರ ರಕ್ಷಣೆಗಾಗಿ ಸದಾ ಶ್ರಮಿಸುತ್ತಿರುವ ಪೊಲೀಸ್ ಇಲಾಖೆಯ ಸಿಬ್ಬಂದಿಗೂ ಕೊರೊನಾ ಬರುತ್ತಿರುವುದು ಚಿಂತೆಗೀಡು ಮಾಡಿದೆ ಎಂದರು.
ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಪರಸ್ಪರ ಸೌಹಾರ್ದತೆಯಿಂದ ವರ್ತಿಸಬೇಕು. ಸರ್ಕಾರ ನೀಡಿರುವ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ಸರ್ಕಾರದ ಆದೇಶದಂತೆ ಈದ್ಗಾ ಮೈದಾನದಲ್ಲಿ ಪ್ರಾರ್ಥನೆಗೆ ಅವಕಾಶವಿಲ್ಲ. ಆಯಾ ಮಸೀದಿಗಳ ಮುಖ್ಯಸ್ಥರು ಸ್ಯಾನಿಟೈಸರ್, ಮ್ಯಾಟ್, ಮಾಸ್ಕ್ ಬಳಕೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕುರಿತು ಮಸೀದಿಯ ಮೈಕ್‍ಗಳ ಮೂಲಕ ಪ್ರಚಾರ ಪಡಿಸಬೇಕು ಎಂದರು.
ಹೆಚ್ಚು ಜನ ಸೇರುವ ಸಾಧ್ಯತೆ ಇದ್ದಲ್ಲಿ, ಪ್ರತಿ ಬ್ಯಾಚ್‍ಗೆ ಗರಿಷ್ಠ 50 ಜನರು ಪ್ರಾರ್ಥನೆ ಸಲ್ಲಿಸುವಂತೆ ಅವಕಾಶ ಮಾಡಿಕೊಂಡು, ಮುಂಚಿತವಾಗಿ ಎಲ್ಲರಿಗೂ ತಿಳಿಸಬೇಕು. ತಂಡಗಳನ್ನು ಮಾಡಿ ಕನಿಷ್ಠ 6 ಫೀಟ್ ಅಂತರದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಾರ್ಥನೆ ಸಲ್ಲಿಸುವಂತೆ ತಿಳುವಳಿಕೆ ನೀಡಬೇಕು ಎಂದು ಎಸ್‍ಪಿ ಹೇಳಿದರು.
ಇದಲ್ಲದೆ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಅನಧಿಕೃತವಾಗಿ ಪ್ರಾಣಿ ಸಾಗಾಣಿಕೆ ಕಂಡು ಬಂದಲ್ಲಿ ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ಅಥವಾ ಜಿಲ್ಲಾ ಕಂಟ್ರೋಲ್ ರೂಂಗೆ ಕರೆ ಮಾಡಿ ತಿಳಿಸಬೇಕು. ಮತ್ತು ಯಾವುದೇ ವ್ಯಕ್ತಿ, ಗುಂಪು ಕಾನೂನು ಕೈಗೆತ್ತಿಕೊಂಡರೆ ಅವರ ವಿರುದ್ಧ ಪ್ರಕರಣ ದಾಖಲಿಸಿ, ಕ್ರಮ ಕೈಗೊಳ್ಳುವುದಾಗಿ ಎಸ್‍ಪಿ ಎಚ್ಚರಿಕೆ ನೀಡಿದರು.