ಧಾರವಾಡ: ಎರಡು ಅಡಿಯಷ್ಟು ಎತ್ತರಕ್ಕೆ ಬರುವ ಶೇಂಗಾ ಬೆಳೆ ಎದೆಯತ್ತರಕ್ಕೆ ಬೆಳೆದು ಅಚ್ಚರಿ ಮೂಡಿಸಿದೆ. ಈ ವರ್ಷ ಸಾಕಷ್ಟು ಮಳೆಯಾಗಿದ್ದರಿಂದ ಫಸಲು ಉತ್ತಮವಾಗಿದ್ದು ಹಲವೆಡೆ ಎರಡೂವರೆ ಅಡಿಗೂ ಮೀರಿ ಬೆಳೆ ಬಂದಿದೆ.
ಶಿವಪ್ಪ ಬೆಳ್ಳಕ್ಕಿ ಅವರ ಹೊಲದಲ್ಲಿ ನಾಲ್ಕು ಅಡಿಗೂ ಹೆಚ್ಚು ಎತ್ತರಕ್ಕೆ ಬೆಳೆದ ಶೇಂಗಾ ಬೆಳೆ. ಧಾರವಾಡ ಹೊರವಲಯದ ಕಮಲಾಪುರದ ರೈತರೊಬ್ಬರ ಜಮೀನಿನಲ್ಲಿ ಎದೆಯೆತ್ತರಕ್ಕೆ ಬೆಳೆದ ಶೇಂಗಾ ಬೆಳೆ ಇದೀಗ ಗಮನ ಸೆಳೆದಿದೆ. ಕಮಲಾಪುರದ ಪತ್ರೆಪ್ಪಜ್ಜನ ಮಠದ ಬಳಿಯ ಶಿವಪ್ಪ ಬೆಳ್ಳಕ್ಕಿ ಎಂಬುವವರ ಜಮೀನಿನಲ್ಲಿ ನಾಲ್ಕು ಅಡಿಗೂ ಹೆಚ್ಚು ಎತ್ತರಕ್ಕೆ ಶೇಂಗಾ ಬೆಳೆ ಬಂದಿದೆ. ಈ ಪ್ರಮಾಣದ ಹಾಗೂ ಇಷ್ಟು ಎತ್ತರಕ್ಕೆ ಬೆಳೆದ ಶೇಂಗಾ ಬೆಳೆ ಕಂಡು ಸ್ಥಳೀಯ ರೈತರು ಸಹ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಜಿಪಿಬಿಡಿ-4 ಎಂಬ ತಳಿಯ ಶೇಂಗಾ ಬೀಜವನ್ನು ತಂದು ನನ್ನ ಎರಡು ಎಕರೆ ಜಮೀನಿನಲ್ಲಿ ಬಿತ್ತನೆ ಮಾಡಲಾಗಿತ್ತು. ಬಿಟ್ಟು ಬಿಡದೇ ಮಳೆ ಸುರಿಯುತ್ತಿರುವುದರಿಂದ ರಸಗೊಬ್ಬರ ಸೇರಿದಂತೆ ಬೆಳೆಗೆ ಯಾವುದೇ ಕೀಟನಾಶಕಗಳ ಔಷಧಿಯನ್ನು ಸಿಂಪಡಿಸಲು ಸಾಧ್ಯವಾಗಲಿಲ್ಲ. ಅದಾಗ್ಯೂ, ಈ ಪ್ರಮಾಣದ ಹಾಗೂ ಇಷ್ಟು ಎತ್ತರಕ್ಕೆ ಬೆಳೆದ ಶೇಂಗಾ ಬೆಳೆ ನೋಡಿ ನಮಗೂ ಆಶ್ಚರ್ಯ ಆಗಿದೆ.
ಶಿವಪ್ಪ ಬೆಳ್ಳಕ್ಕಿ ಅವರ ಹೊಲದಲ್ಲಿ ನಾಲ್ಕು ಅಡಿಗೂ ಹೆಚ್ಚು ಎತ್ತರಕ್ಕೆ ಬೆಳೆದ ಶೇಂಗಾ ಬೆಳೆ. ಇಷ್ಟೊಂದು ಎತ್ತರಕ್ಕೆ ಬೆಳೆದು ನಿಂತ ಶೇಂಗಾವನ್ನು ನಾವು ಇದುವರೆಗೂ ನೋಡಿರಲಿಲ್ಲ. ಇಷ್ಟು ಎತ್ತರದ ಬೆಳೆ ನೋಡಿದ್ದು ಇದೇ ಮೊದಲು. ನಾಲ್ಕು ಅಡಿಗೂ ಹೆಚ್ಚು ಎತ್ತರಕ್ಕೆ ಬೆಳೆದಿದ್ದರಿಂದ ಭಾರ ತಡೆದುಕೊಳ್ಳಲಾಗದೇ ಕಾಳು ಕೈಗೆ ಬರುವ ಹಂತದಲ್ಲಿಯೇ ಬೆಳೆ ಹಾನಿ ಕೂಡ ಆಗಿದೆ. ನಮ್ಮ ಹೊಲದಲ್ಲಿ ಮಾತ್ರವೇ ಶೇಂಗಾ ಇಷ್ಟೊಂದು ಎತ್ತರಕ್ಕೆ ಬೆಳೆದಿದ್ದು ಕೀಳುವುದಕ್ಕೂ ಸಹ ಹರಸಾಹಸ ಪಡಬೇಕಾಯಿತು ಎನ್ನುತ್ತಾರೆ ಶಿವಪ್ಪ ಬೆಳ್ಳಕ್ಕಿ.