ಹುಬ್ಬಳ್ಳಿ: ಕೋವಿಡ್ ಹಗರಣದ ತನಿಖೆ ಕಾಟಾಚಾರಕ್ಕೆ ಮಾಡುತ್ತಿಲ್ಲ. ಕೋವಿಡ್ ಹಗರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ಮಾಡುತ್ತೇವೆ. ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ಮಾಡಿಸುತ್ತಿದ್ದೇವೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲೆಂದೇ ನ್ಯಾಯಾಂಗ ತನಿಖೆ ಮಾಡಿಸುತ್ತಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಹೇಳಿದರು. ನಗರದ ಕಿಮ್ಸ್ ಆಸ್ಪತ್ರೆ ವೈದ್ಯರೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ನಮ್ಮ ಇಲಾಖೆಯಿಂದಲೂ ಕೆಲವೊಂದು ಹಗರಣಗಳ ತನಿಖೆ ನಡಿಯುತ್ತಿದೆ. ನಮ್ಮ ಸರ್ಕಾರದಲ್ಲಿ ಪಾರದರ್ಶಕ ಆಡಳಿತ ಕೊಡುತ್ತೇವೆ ಅಂತ ವಾಗ್ದಾನ ಮಾಡಿದ್ದೇವೆ. ಅದರ ಪ್ರಕಾರ ನಾವು ನಡೆದುಕೊಳ್ಳುತ್ತೇವೆ. ಜನರಿಗೆ ನೀಡಿದ ಭರವಸೆಯಂತೆ ಮೂರು ಗ್ಯಾರಂಟಿ ಜಾರಿಯಾಗಿವೆ. ಗೃಹ ಲಕ್ಷ್ಮಿ ಇದೇ 30 ರಂದು ಅನುಷ್ಠಾನಕ್ಕೆ ತರುತ್ತಿದ್ದೇವೆ ಹಾಗೂ ಯುವನಿಧಿ ಡಿಸೆಂಬರ್ನಲ್ಲಿ ಜಾರಿಯಾಗಲಿದೆ ಎಂದು ತಿಳಿಸಿದರು.
ಸರ್ಕಾರ ನಮ್ಮನ್ನು ಟಾರ್ಗೆಟ್ ಮಾಡುತ್ತಿದೆ ಎಂಬ ಬಿಜೆಪಿ ನಾಯಕರ ಹೇಳಿಕೆ ಪ್ರತಿಕ್ರಿಯಿಸಿ, ಇನ್ನು ತನಿಖೆಯೇ ಪ್ರಾರಂಭವಾಗಿಲ್ಲ, ತನಿಖೆಯನ್ನು ನಿವೃತ್ತ ನ್ಯಾಯಮೂರ್ತಿಗಳು ಮಾಡುತ್ತಿದ್ದಾರೆ. ಬಿಜೆಪಿಯವರು ಈಗಲೇ ಯಾಕೆ ಭಯ ಬೀಳುತ್ತಿದ್ದಾರೆ. ನಮಗೆ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಅವರೇಕೆ ಅಂದುಕೊಳ್ಳುತ್ತಾರೆ. ತನಿಖೆ ನಡೆದರೆ ಸತ್ಯಾಸತ್ಯತೆ ಹೊರಗೆ ಬರುತ್ತದೆ. ಹಿಂದಿನ ಸರ್ಕಾರದಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದೇ ಜನ ಕಾಂಗ್ರೆಸ್ಗೆ ವೋಟು ಹಾಕಿದ್ದು ಎಂದರು.
ನಾವು ಕೇಳಿದ್ದಾಗ ತನಿಖೆ ನಡೆಸಿದ್ದರೆ ಈಗ ನಾವು ತನಿಖೆ ನಡೆಸುವ ಅವಶ್ಯಕೆ ಏನಿತ್ತು. ಸರ್ಕಾರ ಯಾರನ್ನೂ ಟಾರ್ಗೆಟ್ ಮಾಡಿ ತನಿಖೆ ಮಾಡಿಸುತ್ತಿಲ್ಲ. ಜನರಲ್ಲಿ ಹಿಂದಿನ ಸರ್ಕಾರದ ಬಗ್ಗೆ ಆಕ್ರೋಶ ಇದೆ. 40 ಪರ್ಸೆಂಟ್ ಭ್ರಷ್ಟಾಚಾರ ಆಗಿದೆ ಎಂದು ಜನ ಸರ್ಕಾರವನ್ನು ಬದಲಾಯಿಸಿದ್ದಾರೆ ಎಂದರು. ಇನ್ನು ಕಿಮ್ಸ್ ಸಿಬ್ಬಂದಿ ಖಾಸಗಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಸುತ್ತಿರುವ ಬಗ್ಗೆ ಮಾತನಾಡಿ, ದಾಖಲೆಗಳಿದ್ದರೆ ಕೊಡಿ, ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಕರ್ತವ್ಯದ ಸಮಯದಲ್ಲಿ ಸಿಬ್ಬಂದಿ ಕಿಮ್ಸ್ ನಲ್ಲಿಯೇ ಇರಬೇಕಾಗುತ್ತೆ ಎಂದು ವೈದ್ಯರಿಗೆ ಸಚಿವರು ಎಚ್ಚರಿಕೆ ನೀಡಿದರು.
ಇದನ್ನೂ ಓದಿ:ಎಲ್ಲರೂ ಮಾನವ ಧರ್ಮ ಉಳಿಸಿಕೊಂಡು ಹೋಗಬೇಕು: ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್