ಹುಬ್ಬಳ್ಳಿ :ಕರ್ನಾಟಕದಲ್ಲಿ ನೆಲ, ಜಲ, ಭಾಷೆ ವಿಷಯದಲ್ಲಿ ಅನ್ಯಾಯ ಆದಾಗ ಬಂದ್ ಮಾಡೋದು ಸಹಜ. ಆದರೇ, ಆಸ್ತಿ-ಪಾಸ್ತಿ ನಷ್ಟ ಆಗದೆ ಇರೋ ಹಾಗೆ ಬೆಂಗಳೂರು ಬಂದ್ ಮಾಡಿ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ನಗರದಲ್ಲಿಂದು ಹೊಸ ಬಸ್ಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾವೇರಿ ನೀರು ವಿಚಾರದಲ್ಲಿ ನಮ್ಮ ತಪ್ಪು ಇಲ್ಲ. ಮಳೆ ಬರದೆ ಇರೋದು ನಮ್ಮ ತಪ್ಪಾ? ಅದು ಪ್ರಕೃತಿ ವಿಕೋಪ. ಕಳೆದ ಬಾರಿ 600 ಟಿಎಂಸಿ ನೀರು ಸಮುದ್ರಕ್ಕೆ ಹರಿದು ಹೋಯ್ತು. ಇದೀಗ ನಮ್ಮ ವಕೀಲರು ಸುಪ್ರೀಂಕೋರ್ಟ್ನಲ್ಲಿ ವಾದ ಮಾಡಿದ್ದಾರೆ. ನಮ್ಮ ಹತ್ತಿರ ನೀರು ಇಲ್ಲ ಎಂಬುದು ಕಾವೇರಿ ನೀರು ನಿರ್ವಹಣಾ ಸಮತಿಗೆ ಗೊತ್ತಿಲ್ವಾ? ಎಂದು ಪ್ರಶ್ನಿಸಿದರು. ಬೆಂಗಳೂರು ಬಂದ್ ವೇಳೆ ಬಿಎಂಟಿಸಿ ಬಸ್ ಸಂಚಾರದ ಪ್ರಶ್ನೆಗೆ ಕಾರ್ಮಿಕ ಮುಂಖಡರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಯಾಕೆ ಈ ವಿಷಯದಲ್ಲಿ ಮೌನ ವಹಿಸಿದ್ದಾರೆ. ರಾಜ್ಯದ 20 ಸಂಸದರು ಯಾಕೆ ಮಾತಾಡಲ್ಲ. ಎಲ್ಲರನ್ನೂ ಕರೆದು ಪ್ರಧಾನಿಯವರು ತೀರ್ಮಾನ ಮಾಡಬೇಕು. ಅವರ ಕಡೆ ಅಧಿಕಾರ ಇದೆ ಎಂದರು. ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಡೆ ದಾಖಲೆ ಇದ್ರೆ ಲೋಕಾಯುಕ್ತಕ್ಕೆ ಹೋಗಲಿ. ಕುಮಾರಸ್ವಾಮಿ ಇದೀಗ ವಿರೋಧ ಪಕ್ಷದವರು. ಬಿಜೆಪಿ, ಜೆಡಿಎಸ್ ಮೈತ್ರಿ ಅವರಿಗೆ ಬಿಟ್ಟಿದ್ದು. ಲೋಕಸಭೆ ಚುನಾವಣೆಯಲ್ಲಿ ನಮಗೆ 20 ಸ್ಥಾನ ಬರುತ್ತದೆ. ಬಿಜೆಪಿಗೆ ಒಂದೋ ಎರಡೋ ಬರಬಹುದು ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.