ಹುಬ್ಬಳ್ಳಿ:"ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ" ಅಭಿಯಾನದ ಹಿನ್ನೆಲೆಯಲ್ಲಿ ಇದೇ 20ರಂದು ಕಂದಾಯ ಸಚಿವ ಆರ್.ಅಶೋಕ್ ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮದಲ್ಲಿ ವಾಸ್ತವ್ಯ ಮಾಡಲಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮದಲ್ಲಿ ಸಚಿವರು ಗ್ರಾಮ ವಾಸ್ತವ್ಯ ಮಾಡುತ್ತಿದ್ದು, ಛಬ್ಬಿ ಗ್ರಾಮದಲ್ಲಿ ಸಚಿವರ ಗ್ರಾಮ ವಾಸ್ತವ್ಯ ವಿಚಾರ ಜಿಲ್ಲಾಡಳಿತದ ಆಯ್ಕೆ ಅಲ್ಲ. ಛಬ್ಬಿ ಗ್ರಾಮವನ್ನು ಸಚಿವರೇ ಆಯ್ಕೆ ಮಾಡಿಕೊಂಡಿದ್ದಾರೆ ಎಂದರು.
ಜಿಲ್ಲಾಡಳಿತದಿಂದ ಗ್ರಾಮ ವಾಸ್ಯವ್ಯದ ಲಿಸ್ಟ್ ಕಳಿಸಿರಲಿಲ್ಲ. ಆದರೆ ಸಚಿವರೇ ಸ್ವತಃ ಛಬ್ಬಿ ಗ್ರಾಮವನ್ನು ಆಯ್ಕೆ ಮಾಡಿಕೊಂಡಿದ್ದು, 20ರಂದು ಮೆರವಣಿಗೆ ಮುಖಾಂತರ ಅರ್.ಅಶೋಕ್ ಅವರಿಗೆ ಸ್ವಾಗತ ಮಾಡಿಕೊಳ್ಳಲು ಸಿದ್ಧತೆ ನಡೆಸಲಾಗಿದೆ ಎಂದು ತಿಳಿಸಿದರು.
ಗ್ರಾಮ ವಾಸ್ತವ್ಯದಿಂದ ಗ್ರಾಮಸ್ಥರಿಗೆ ಎಲ್ಲಾ ಸೌಲಭ್ಯಗಳು ಸಿಗಬೇಕು ಎಂಬ ಸದುದ್ದೇಶದಿಂದ ಗ್ರಾಮ ವಾಸ್ತವ್ಯ ಆಯೋಜನೆ ಮಾಡಲಾಗಿದ್ದು, ಗ್ರಾಮದ ಸಮಸ್ಯೆಗಳ ಬಗ್ಗೆ ಈಗಾಗಲೇ ದೂರುಗಳು ಬಂದಿವೆ. ಅವತ್ತಿನ ದಿನ ದೂರುಗಳ ಬಗ್ಗೆ ಸಂವಾದ ನಡೆಸಲಾಗುತ್ತದೆ. ಇದರಿಂದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದರು.
ಗ್ರಾಮದಲ್ಲಿ ಹೈಸ್ಕೂಲ್ ಸ್ಥಾಪನೆ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಹೀಗಾಗಿ ಛಬ್ಬಿ ಗ್ರಾಮವನ್ನ ಸಚಿವರೇ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು.