ಧಾರವಾಡ :ವಿದ್ಯಾಕಾಶಿ ಫೇಡಾನಗರಿ ಎಂದೇ ಖ್ಯಾತಿ ಹೊಂದಿರುವ ಜಿಲ್ಲೆಯಲ್ಲಿ ಇದೀಗ ಮೀಟರ್ ಬಡ್ಡಿ ದಂಧೆ ಎಗ್ಗಿಲ್ಲದೇ ಸಾಗಿದೆ. ಅವಳಿನಗರದಲ್ಲಿ ಮೀಟರ್ ಬಡ್ಡಿ ದಂಧೆ ಹೆಚ್ಚಾಗಿದೆ. ಇದಕ್ಕೆ ಪೂರಕ ಎಂಬಂತೆ ಸಾಲ ನೀಡಿದವರ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವುದು ಬಡ್ಡಿ ದಂಧೆಗೆ ಹಿಡಿದ ಕೈಗನ್ನಡಿಯಾಗಿದೆ.
ಮೀಟರ್ ಬಡ್ಡಿ ದಂಧೆಯಿಂದ ನೊಂದು ವ್ಯಕ್ತಿ ಆತ್ಮಹತ್ಯೆ ಧಾರವಾಡ ನಗರದ 39 ವರ್ಷದ ವಿಜಯ್ ನಾಗನೂರ ಎಂಬಾತ ಮೀಟರ್ ಬಡ್ಡಿ ದಂಧೆಗೆ ಬಲಿಯಾಗಿದ್ದಾರೆ. ಲಕ್ಷ್ಮಿಸಿಂಗನಕೆರೆ ಶಿವರಾಜ ಮಾಕಡವಾಲೆ ಎಂಬಾತನಿಂದ ಕೆಲ ವರ್ಷಗಳ ಹಿಂದೆ 25 ಸಾವಿರ ರೂಪಾಯಿ ಸಾಲ ಮಾಡಿದ್ದರು ಎನ್ನಲಾಗಿದೆ.
ಈ ವೇಳೆ ವಿಜಯ್ ಖಾಲಿ ಚೆಕ್ಗೆ ಸಹಿ ಕೂಡ ಮಾಡಿದ್ದರು. ಹೀಗಾಗಿ, ಸಾಲ ತೀರಿದರು ನಿರಂತರವಾಗಿ ಮಾಕಡವಾಲೆ ವಿಜಯ್ ಅವರಿಂದ ಹಣ ಕೇಳಿ ಕುಟುಂಬಕ್ಕೆ ಬೆದರಿಕೆಯೊಡಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಒಂದು ಆತ್ಮಹತ್ಯೆ ಪ್ರಕರಣ ಇದೀಗ ಅವಳಿ ನಗರದಲ್ಲಿನ ಮೀಟರ್ ಬಡ್ಡಿ ಮಾಫಿಯಾದ ಕರಾಳ ಮುಖ ಅನಾವರಣಗೊಳಿಸಿದೆ. ಮೃತ ವಿಜಯ್ನಿಂದ ಲಕ್ಷ ಲಕ್ಷ ಹಣ ಪಡೆದ ನಂತರವೂ ಮಾಕಡವಾಲೆ ಮತ್ತೆ ನಾಲ್ಕು ಲಕ್ಷ ನೀಡುವಂತೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ವಿಜಯ್ ಮನೆಯಲ್ಲಿ ಯಾರು ಇಲ್ಲದ ವೇಳೆ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆ.
ಸಾಯುವ ಮುನ್ನ ಡೆತ್ ನೋಟ್ ಬರೆದಿರುವ ವಿಜಯ್ ತನ್ನ ಸಾವಿಗೆ ಶಿವರಾಜ ಮಾಕಡವಾಲೆ ಕಾರಣ ಎಂದು ಆರೋಪಿಸಿದ್ದಾರೆ. ಶಿವರಾಜ ಮಾಕಡವಾಲೆಯನ್ನ ಬಂಧಿಸಿದ ಉಪನಗರ ಠಾಣೆ ಪೊಲೀಸರು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ನನ್ನ ಮಗನಿಗೆ ಬಂದ ಸ್ಥಿತಿ ಮುಂದೆ ಯಾರಿಗೂ ಬಾರದಿರಲಿ, ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಮೃತನ ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : Watch.. ರಾಜಕೀಯಕ್ಕೆ ನಮ್ಮ ವೈಯಕ್ತಿಕ ವಿಚಾರ ಎಳೆದು ತರಬೇಡಿ... ಕಣ್ಣೀರಿಟ್ಟ ಕೆಜಿಎಫ್ ಬಾಬು ಕುಟುಂಬ