ಹುಬ್ಬಳ್ಳಿ:ಪಾದಯಾತ್ರೆ ಮೂಲಕ ಕಾಂಗ್ರೆಸ್ ಪಕ್ಷದಿಂದ ಭಂಡ ರಾಜಕಾರಣ ಮಾಡಲಾಗುತ್ತಿದೆ. ಮುಂಬರುವ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಂತಾರಾಜ್ಯ ಜಲ ವಿವಾದಗಳನ್ನು ಸೂಕ್ಷ್ಮವಾಗಿ ಬಗೆಹರಿಸಬೇಕಾಗುತ್ತದೆ. ಹೋರಾಟದ ಮೂಲಕ ಇದನ್ನು ಪರಿಹರಿಸೋಕೆ ಆಗಲ್ಲ. ವಿಧಾನಸಭೆ ಚುನಾವಣೆಗೆ ಇನ್ನೂ ಒಂದೂವರೆ ವರ್ಷವಿದೆ. ಅದನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ಈಗಿನಿಂದಲೇ ರಾಜಕಾರಣ ಆರಂಭಿಸಿದೆ ಎಂದು ಆರೋಪಿಸಿದರು.
ನೀರಾವರಿ ಮತ್ತು ಕುಡಿಯುವ ನೀರಿನ ಯೋಜನೆಯನ್ನು ಚುನಾವಣಾ ಅಸ್ತ್ರವಾಗಿ ಬಳಸುತ್ತಿದೆ. ಪಾದಯಾತ್ರೆ ಮಾಡುವ ಮೂಲಕ ಪರಿಸ್ಥಿತಿಯನ್ನು ಮತ್ತಷ್ಟು ಜಟಿಲಗೊಳ್ಳುವಂತೆ ಕಾಂಗ್ರೆಸ್ ಮಾಡ್ತಿದೆ. ನೀರಾವರಿ ಇರಲಿ, ಯಾವುದೇ ಯೋಜನೆ ಇರಲಿ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅದರ ಬಗ್ಗೆ ಚಕಾರ ಎತ್ತಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದಾಗಲೇ ಇದಕ್ಕೊಂದು ಪರಿಹಾರ ಹುಡುಕುವ ಪ್ರಯತ್ನ ನಡೆದಿದೆ ನಡೆದಿದೆ ಎಂದರು.
ಇಷ್ಟು ವರ್ಷ ಸುಮ್ಮನೆ ಕುಳಿತು ಈಗ ಏಕೆ ಕಾಂಗ್ರೆಸ್ನವರು ಹೋರಾಟ ಮಾಡ್ತಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ಮೇಕೆದಾಟು ಯೋಜನೆ ಆರಂಭಿಸಬಹುದಿತ್ತಲ್ಲವೇ ಎಂದು ಪ್ರಶ್ನಿಸಿದರು. ಅಧಿವೇಶನದ ಸಂದರ್ಭದಲ್ಲಿ ಮೇಕೆದಾಟು ಯೋಜನೆ ಬಗ್ಗೆ ಕಾಂಗ್ರೆಸ್ನವರು ಗಂಭೀರ ಚರ್ಚೆಗೆ ಪ್ರಯತ್ನ ಮಾಡಲಿಲ್ಲ. ಅಸೆಂಬ್ಲಿಯಲ್ಲಿ ಇದನ್ನು ಚರ್ಚಿಸುವುದಿಲ್ಲ. ಚುನಾವಣೆ, ಮತಬ್ಯಾಂಕ್ ರಾಜಕಾರಣಕ್ಕಾಗಿ ಈ ಪಾದಯಾತ್ರೆ ಮಾಡ್ತಿದಾರೆ ಎಂದು ಶೆಟ್ಟರ್ ವಾಗ್ದಾಳಿ ನಡೆಸಿದರು.