ಧಾರವಾಡ :ಹೋಮ್ ಐಸೋಲೇಷನ್‍ದಲ್ಲಿರುವ ಸೋಂಕಿತರು ಮಾರ್ಗಸೂಚಿಗಳ ಪಾಲನೆಯೊಂದಿಗೆ ರೋಗದಿಂದ ಗುಣಮುಖರಾಗಲು ಜಿಲ್ಲಾಡಳಿತ ಮತ್ತು ಮಹಾನಗರಪಾಲಿಕೆ ಹೊಸ ಕ್ರಮಕೈಗೊಂಡಿದೆ. ಸೋಂಕಿತರ ಮನೆ ಬಾಗಿಲಿಗೆ ಔಷಧಿ ಕಿಟ್ ವಿತರಣೆ ಮಾಡುತ್ತಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಇದು ಉತ್ತಮ ರೀತಿಯಿಂದ ಅನುಷ್ಠಾನವಾಗುತ್ತಿದೆ.
ಮನೆ ಬಾಗಿಲಿಗೆ ಏಕೆ ವಿತರಣೆ :ಕೋವಿಡ್ ಸೋಂಕಿತ ವ್ಯಕ್ತಿ ಸಾರ್ವಜನಿಕವಾಗಿ ಸಂಚರಿಸುವುದರಿಂದ ರೋಗ ಇತರರಿಗೂ ಬೇಗ ಹರಡುತ್ತದೆ. ಹಾಗಾಗಿ, ಸೋಂಕಿತ ವ್ಯಕ್ತಿಯು ಸಾರ್ವಜನಿಕವಾಗಿ, ಅನಗತ್ಯವಾಗಿ ಸಂಚರಿಸುವುದನ್ನು ನಿಯಂತ್ರಿಸಲು ಚಿಕಿತ್ಸೆ, ಔಷಧಿ ಹಾಗೂ ಆಸ್ಪತ್ರೆಗಳಿಗೆ ಅಲೆಯದಂತೆ ಮಾಡಲು ಔಷಧಿ ಕಿಟ್‍ಗಳನ್ನು ಸೋಂಕಿತರ ಮನೆ ಬಾಗಿಲಿಗೆ ತಲುಪಿಸುವ ಮೂಲಕ ಸೋಂಕಿತನ ಕುಟುಂಬವನ್ನು ಜಾಗೃತಗೊಳಿಸಲಾಗುತ್ತದೆ.
ಔಷಧಿ ಕಿಟ್ ಹೇಗೆ ಪಡೆಯುವುದು :ಮಹಾನಗರ ಪಾಲಿಕೆಯಲ್ಲಿ ಕೋವಿಡ್ ಸೋಂಕಿತರಿಗೆ ಔಷಧಿ ವಿತರಣೆಗಾಗಿ ಸಹಾಯವಾಣಿ ಆರಂಭಿಸಲಾಗಿದೆ. ದಿನದ 24 ಗಂಟೆಯೂ ಮೂರು ಶಿಫ್ಟ್ ಮೇಲೆ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಹಾನಗರದ ಯಾವುದೇ ಭಾಗದಿಂದ ಕೋವಿಡ್ ಸೋಂಕಿತರು ಔಷಧಿ ಕಿಟ್ ಕೇಳಿ ಕರೆ ಮಾಡಿದರೆ, ತಕ್ಷಣ ಸಂಬಂಧಿತ ವಲಯ ಕಚೇರಿ ಮೂಲಕ ಆಯಾ ವಾರ್ಡ್‍ನಲ್ಲಿರುವ ಸೋಂಕಿತರ ಮನೆ ಬಾಗಿಲಿಗೆ ಔಷಧಿ ತಲುಪಿಸಲಾಗುತ್ತಿದೆ. ರಾತ್ರಿಯೂ ಸಹ ಈ ಸೇವೆ ಲಭ್ಯವಿದೆ. ಗ್ರಾಮೀಣ ಪ್ರದೇಶದಲ್ಲಿ ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ತಾಲೂಕಾ ಆಸ್ಪತ್ರೆಗಳಿಂದ ಔಷಧಿ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ.
ಔಷಧಿ ಕಿಟ್ ವಿತರಕರು :ಔಷಧಿ ಕಿಟ್ ವಿತರಣೆಗಾಗಿ ಸುಮಾರು 30ಕ್ಕೂ ಹೆಚ್ಚು ವಾಹನಗಳನ್ನು ಸಿದ್ಧಗೊಳಿಸಲಾಗಿದೆ. ಪಾಲಿಕೆಯ ಪ್ರತಿ ವಲಯಕ್ಕೆ 2 ರಿಂದ 3 ವಾಹನ ನೀಡಲಾಗಿದೆ. ಪ್ರತಿ ತಂಡದಲ್ಲಿ ಹೆಲ್ತ್ ಇನ್ಸ್ಪೆಕ್ಟರ್, ಬಿಲ್ ಕಲೆಕ್ಟರ್ ಮತ್ತು ಅಗತ್ಯವಿದ್ದಲ್ಲಿ ಆರೋಗ್ಯ ಸಿಬ್ಬಂದಿ ಇರುತ್ತಾರೆ. ಸೋಂಕು ದೃಢಪಟ್ಟ ವ್ಯಕ್ತಿಗೆ ಮತ್ತು ಕರೆ ಮಾಡಿದ ಸೋಂಕಿತರ ಮನೆಗೆ ತಂಡವು ಭೇಟಿ ನೀಡಿ, ಚಿಕಿತ್ಸೆಗೆ ಅಗತ್ಯವಿರುವ ಔಷಧಿಗಳ ಕಿಟ್ ನೀಡಿ, ಸೋಂಕಿತನ ಆರೋಗ್ಯ ವಿಚಾರಿಸುತ್ತದೆ. ಹೋಮ್ ಐಸೋಲೇಷನ್ ಮಾರ್ಗಸೂಚಿಗಳನ್ನು ವಿವರಿಸಿ ಆಪ್ತ ಸಮಾಲೋಚನೆ ಮೂಲಕ ಧೈರ್ಯ, ಆತ್ಮವಿಶ್ವಾಸ ಮೂಡಿಸುತ್ತದೆ.
ಸೋಂಕಿತ ಮಕ್ಕಳಿಗಾಗಿ ವಿಶೇಷ ತಂಡ :ಕೋವಿಡ್ 3ನೇ ಅಲೆಯು ಮಕ್ಕಳನ್ನು ಬಾಧಿಸುತ್ತಿದ್ದು, ಜಿಲ್ಲೆಯ ಹಲವಾರು ಮಕ್ಕಳಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಸೋಂಕಿತ ಮಕ್ಕಳಿಗೆ ಅಗತ್ಯ ಚಿಕಿತ್ಸೆ, ಔಷಧಿ ನೀಡಿ ಅವರನ್ನು ಗುಣಮುಖರನ್ನಾಗಿ ಮಾಡಲಾಗಿದೆ. ಕೋವಿಡ್ ಸೋಂಕು ದೃಢಪಟ್ಟ ಮಕ್ಕಳಿಗೆ ವಿಶೇಷ ಕಾಳಜಿ ವಹಿಸಲು ಮಕ್ಕಳ ಡಾಕ್ಟರ್ಗಳ ಏಳು ವಿಶೇಷ ತಂಡಗಳನ್ನು ರಚಿಸಲಾಗಿದೆ. ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ ನೇಮಕಗೊಂಡಿರುವ ವೈದ್ಯರು ಈ ವಿಶೇಷ ತಂಡದಲ್ಲಿದ್ದು, ಅವರು ಮಕ್ಕಳಿಗೆ ಆಪ್ತ ಸಮಾಲೋಚನೆ ಮಾಡಿ ನಿಯಮಿತ ಆಹಾರ, ಔಷಧಿ ಪ್ರಮಾಣ, ವ್ಯಾಯಾಮ ಕುರಿತು ತಿಳುವಳಿಕೆ ನೀಡುತ್ತಾರೆ.