ಕರ್ನಾಟಕ

karnataka

ETV Bharat / state

ಆಟದ ಮೈದಾನದಲ್ಲಿ ಮಾರುಕಟ್ಟೆ ನಿರ್ಮಾಣ: ತಡೆಯಾಜ್ಞೆ ವಿಸ್ತರಿಸಿದ ಹೈಕೋರ್ಟ್ - ಆಟದ ಮೈದಾನದಲ್ಲಿ ಮಾರುಕಟ್ಟೆ ನಿರ್ಮಾಣ

ಹುಬ್ಬಳ್ಳಿಯ ಅಂಬೇಡ್ಕರ್ ಆಟದ ಮೈದಾನದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿ ಕೈಗೊಂಡಿರುವ ಮಾರುಕಟ್ಟೆ ನಿರ್ಮಾಣ ಕಾಮಗಾರಿಗೆ ನೀಡಿರುವ ತಡೆಯಾಜ್ಞೆಯನ್ನು ಹೈಕೋರ್ಟ್ ಮುಂದಿನ ಆದೇಶದವರೆಗೆ ವಿಸ್ತರಿಸಿದೆ.

ಹೈಕೋರ್ಟ್
ಹೈಕೋರ್ಟ್

By

Published : Jan 12, 2021, 10:06 PM IST

ಬೆಂಗಳೂರು:ಹುಬ್ಬಳ್ಳಿಯ ಅಂಬೇಡ್ಕರ್ ಆಟದ ಮೈದಾನದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿ ಕೈಗೊಂಡಿರುವ ಮಾರುಕಟ್ಟೆ ನಿರ್ಮಾಣ ಕಾಮಗಾರಿಗೆ ನೀಡಿರುವ ತಡೆಯಾಜ್ಞೆಯನ್ನು ಹೈಕೋರ್ಟ್ ಮುಂದಿನ ಆದೇಶದವರೆಗೆ ವಿಸ್ತರಿಸಿದೆ.

ಈ ಕುರಿತು ಸ್ಥಳೀಯ ನಿವಾಸಿಗಳಾದ ನವೀನ್ ಪ್ರಭು ನವಲೂರು ಹಾಗೂ ಬಶೀರ್ ಅಹ್ಮದ್ ಜಿ. ಸವಣೂರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಯೋಜನೆ ಎಂಡಿ ಪರ ವಾದಿಸಿದ ವಕೀಲರು, ಇದು ತಾತ್ಕಾಲಿಕ ವ್ಯವಸ್ಥೆಯಷ್ಟೇ. ಹಳೇ ಮಾರುಕಟ್ಟೆ ಇರುವ ಜಾಗದಿಂದ ವ್ಯಾಪಾರಿಗಳನ್ನು ಹೊಸ ಕಟ್ಟಡಕ್ಕೆ ಕೆಲ ಕಾಲ ಸ್ಥಳಾಂತರಿಸಿ, ನಂತರ ಹಳೇ ಮಾರುಕಟ್ಟೆ ಜಾಗದಲ್ಲಿ ಹೊಸ ಕಟ್ಟಡ ನಿರ್ಮಿಸಿ ಮತ್ತೆ ಅಲ್ಲಿಗೇ ವಾಪಸ್​ ಕಳಿಸಲಾಗುತ್ತದೆ ಎಂದರು.

ಇದಕ್ಕೆ ಆಕ್ಷೇಪಿಸಿದ ಪೀಠ, ಕರ್ನಾಟಕ ಉದ್ಯಾನವನಗಳು, ಆಟದ ಮೈದಾನಗಳು ಮತ್ತು ಖಾಲಿ ಜಾಗಗಳು (ಸಂರಕ್ಷಣೆ ಮತ್ತು ನಿಯಂತ್ರಣ) ಕಾಯ್ದೆಯಲ್ಲಿ ಇಂತಹ ಕ್ರಮಗಳಿಗೆ ಅವಕಾಶವಿಲ್ಲ. ಮತ್ತೆ ಯಾವುದಾದರೂ ಕಾಯ್ದೆಯಲ್ಲಿ ಇದಕ್ಕೆ ಅವಕಾಶವಿದೆಯೇ ತಿಳಿಸಿ. 150 ಮಂದಿ ವ್ಯಾಪಾರಿಗಳನ್ನು ಆಟದ ಮೈದಾನದಲ್ಲಿ ಕಟ್ಟಡ ನಿರ್ಮಿಸಿ ಅಲ್ಲಿಗೆ ಸ್ಥಳಾಂತರಿಸಲು ಯೋಜನೆ ರೂಪಿಸಿದ್ದೀರಿ. ಇದೇನಾ ನಿಮ್ಮ ಸ್ಮಾರ್ಟ್ ಯೋಜನೆ ಎಂದು ಪ್ರಶ್ನಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಪರ ವಕೀಲರು, ನಮ್ಮ ಬಳಿ ಸದ್ಯಕ್ಕೆ ಬೇರೆ ಆಯ್ಕೆಗಳಿಲ್ಲ. ಹೀಗಾಗಿ ಅನುಮತಿಸಬೇಕು ಎಂದು ಮನವಿ ಮಾಡಿದರು.

ವಾದ ಒಪ್ಪದ ಪೀಠ, ಹೆಚ್ಚುವರಿ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿತು. ಹಾಗೆಯೇ ಸ್ಮಾರ್ಟ್ ಸಿಟಿ ಯೋಜನೆ ಅಡಿ ಕೈಗೊಂಡಿರುವ ನಿರ್ಮಾಣ ಕಾಮಗಾರಿಗೆ ಸೆಪ್ಟೆಂಬರ್ 25ರಂದು ನೀಡಿರುವ ತಡೆಯಾಜ್ಞೆ ವಿಸ್ತರಿಸಿ ವಿಚಾರಣೆ ಮುಂದೂಡಿತು.

ಹಳೇ ಹುಬ್ಬಳ್ಳಿಯ ಹೆಗ್ಗೇರಿ ಪ್ರದೇಶದಲ್ಲಿ ಕಳೆದ 15 ವರ್ಷಗಳಿಂದ ಡಾ. ಬಿ.ಆರ್.ಅಂಬೇಡ್ಕರ್ ಆಟದ ಮೈದಾನ ಅಸ್ತಿತ್ವದಲ್ಲಿದೆ. ಆದರೆ, ಇತ್ತೀಚೆಗೆ ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಯೋಜನೆ ಅಡಿ ಮೈದಾನದಲ್ಲಿ ವ್ಯಾಪಾರಿಗಳಿಗೆ ಮಾರುಕಟ್ಟೆ ನಿರ್ಮಿಸಲಾಗುತ್ತಿದೆ. ಈ ಸಂಬಂಧ ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರು ಸೇರಿದಂತೆ ಸಂಬಂಧಿಸಿದವರಿಗೆಲ್ಲ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ABOUT THE AUTHOR

...view details