ಹುಬ್ಬಳ್ಳಿ:ಮಹದಾಯಿ ಯೋಜನೆ ಜಾರಿ ಕುರಿತಂತೆ ಗೆಜೆಟ್ ನೋಟಿಫಿಕೇಶನ್ ಹೊರಡಿಸುವಂತೆ ರಾಜ್ಯಪಾಲರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಗಿದ್ದು, ಈ ಬಗ್ಗೆ ಯಾವ ಕ್ರಮ ಕೈಕೊಂಡಿದ್ದಾರೆಂಬ ಮಾಹಿತಿಯನ್ನು ರಾಜ್ಯದ ಜನತೆಗೆ 15 ದಿನಗಳೊಳಗೆ ತಿಳಿಸಬೇಕು. ಇಲ್ಲದಿದ್ದಲ್ಲಿ ಹೈಕೋರ್ಟ್ನಲ್ಲಿ ರಾಜ್ಯಪಾಲರ ಮುಖ್ಯ ಕಾರ್ಯದರ್ಶಿ ವಿರುದ್ಧ ರಿಟ್ ಅರ್ಜಿ ಸಲ್ಲಿಸಲಾಗುವುದು ಎಂದು ರೈತ ಸೇನಾ ರಾಜ್ಯಾಧ್ಯಕ್ಷ ವೀರೇಶ್ ಸೊಬರದಮಠ ಎಚ್ಚರಿಕೆ ರವಾನಿಸಿದ್ದಾರೆ.
ಮಹದಾಯಿ ಯೋಜನೆ ಜಾರಿ ಕುರಿತಂತೆ ಗೆಜೆಟ್ ನೋಟಿಫಿಕೇಶನ್ ಹೊರಡಿಸಲು ಆಗ್ರಹ : ವೀರೇಶ್ ಸೊಬರದಮಠ ನಗರದಲ್ಲಿಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಮಹದಾಯಿ ವಿಚಾರವಾಗಿ ರಾಜ್ಯಪಾಲರು ಗೆಜೆಟ್ ನೋಟಿಫಿಕೇಶನ್ ಹೊರಡಿಸುವಲ್ಲಿ ಮಧ್ಯ ಪ್ರವೇಶ ಮಾಡುವಂತೆ ಆಗ್ರಹಿಸಿ ಕಳೆದ ತಿಂಗಳು ಲಕ್ಷಾಂತರ ಪತ್ರಗಳಿಗೆ ಸಹಿ ಮಾಡಿಸಿ ಕಳಿಸಿಕೊಡುವ ಮೂಲಕ ಪತ್ರ ಚಳವಳಿ ಸೇರಿದಂತೆ ರೈತ ಸೇನಾ ಕರ್ನಾಟಕದ 4 ಜಿಲ್ಲೆಯ 11 ತಾಲೂಕಿನ ರೈತರು ಹಾಗೂ ರೈತ ಮಹಿಳೆಯರು ಅ.17 ರಂದು ರಾಜ್ಯಪಾಲರನ್ನು ಭೇಟಿ ಹಿನ್ನಲೆಯಲ್ಲಿ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ಮುಂಭಾಗದಲ್ಲಿ ಮೂರು ದಿನಗಳವರೆಗೆ ಹಗಲು ರಾತ್ರಿ ಎನ್ನದೇ ನಿರಂತರ ಹೋರಾಟ ಮಾಡಿದ್ದೆವು. ಹಾಗಾಗಿಯೂ ಕೂಡಾ ರಾಜ್ಯಪಾಲರು ತಮ್ಮ ಸಮಾಜದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತಿ ತೋರಿಸಿದರೇ ಹೊರತು ರೈತರನ್ನು ಭೇಟಿ ಆಗಲಿಲ್ಲ. ಈ ಹಿನ್ನಲೆಯಲ್ಲಿ ಮನವಿ ಸಲ್ಲಿಸಿ ಹಲವು ದಿನಗಳೇ ಕಳೆಯುತ್ತಾ ಬಂದಿದ್ದು, ಈ ಬಗ್ಗೆ ಅವರು ಯಾವ ಕ್ರಮ ಕೈಗೊಂಡಿದ್ದಾರೆ ಎಂಬುದನ್ನು ಸೂಕ್ತ ಮಾಹಿತಿಯೊಂದಿಗೆ ತಿಳಿಸಬೇಕು. ಇಲ್ಲವಾದರೆ ರಿಟ್ ಅರ್ಜಿ ಹಾಕಲಾಗುವುದು ಎಂದರು.
ಸಮಿತಿ ರಚನೆ ಬೇಡ:ರಾಜ್ಯದ ಮೂರು ಪಕ್ಷಗಳು ಮಹದಾಯಿ ವಿಚಾರವನ್ನು ಕೇವಲ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದು, ಯಾರೊಬ್ಬರು ಪ್ರಯಾಣಿಕವಾಗಿ ಪ್ರಯತ್ನ ಮಾಡಿಲ್ಲ. ಅಲ್ಲದೇ ರಾಜ್ಯದ ನೀರಾವರಿ ತಜ್ಞರು, ಅಧಿಕಾರಿಗಳು ಪಿಡಿಆರ್ ತಯಾರಿಸಿ ರಾಜ್ಯಕ್ಕೆ ನೀರು ತರುವಂತೆ ಮಾಡಿದರು. ಅದನ್ನು ರಾಜ್ಯದ ರಾಜಕಾರಣಿಗಳು ತಾವೇ ತಂದಿದ್ದೇವೆ ಎಂದು ಬಿಂಬಿಸಿಕೊಂಡು ಗೋವಾದ ಜನರ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದರು. ಪರಿಣಾಮ ಗೋವಾದ ಜನರು ಸರ್ಕಾರದ ಮೇಲೆ ಒತ್ತಡ ಹಾಕಿ ಮಹದಾಯಿ ವಿಚಾರವಾಗಿ ಮತ್ತೆ ಕ್ಯಾತೆ ತೆಗೆಯುವುವಂತೆ ಮಾಡಿದರು. ಇದರಿಂದಾಗಿ ಕೇಂದ್ರದ ನೀರಾವರಿ ಸಚಿವ ಪ್ರಕಾಶ್ ಜಾವಡೇಕರ ಅವರು ಮಹದಾಯಿ ವಿಚಾರವಾಗಿ ಸಮಿತಿ ರಚನೆಗೆ ನಿರ್ಧರಿಸಿರುವುದು, ಮತ್ತಷ್ಟು ವಿಳಂಬ ಧೋರಣೆ ಅನುಸರಿಸುವ ನಿಲುವು ಎಂದು ಸೊಬರದಮಠ ಆರೋಪಿಸಿದರು.
ರಾಜಕಾರಣಿಗಳಿಗೆ ಎಚ್ಚರಿಕೆ: ಮಹದಾಯಿ ಅಚ್ಚುಕಟ್ಟಿನ ಶಾಸಕರು, ಸಚಿವರು, ಸಂಸದರು ರಾಜ್ಯ ಅಥವಾ ಕೇಂದ್ರ ಸರ್ಕಾರ ಮೇಲೆ ಒತ್ತಡ ಹಾಕಿ ಕೂಡಲೇ ಗೆಜೆಟ್ ನೋಟಿಫಿಕೇಶನ್ ಹೊರಡಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಸಂಸತ್ ಭವನಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ರೈತ ಹೋರಾಟಗಾರ ತಿಳಿಸಿದರು.
ಡಿ.ಕೆ.ಶಿ.ಗೆ ತಿರುಗೇಟು:ಹಿಂದಿನ ಸರ್ಕಾರ ಇದ್ದಾಗ ನೀರಾವರಿ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ಅವರಿಗೆ ಮಹದಾಯಿ ವಿಚಾರವಾಗಿ ಗೆಜೆಟ್ ನೋಟಿಫಿಕೇಶನ್ ಹೊರಡಿಸುವಂತೆ ಮೂರು ಬಾರಿ ಮನವಿ ಸಲ್ಲಿಸಿದ್ದರೂ ಸಹ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಇದೀಗ ಅಧಿಕಾರ ಕಳೆದಕೊಂಡ ನಂತರ ಮಹದಾಯಿ ವಿಚಾರವಾಗಿ ಮಾತನಾಡುತ್ತಿರುವುದು ಖಂಡನೀಯ. ರಾಜಕಾರಣಿಗಳು ಬಿಟ್ಟಿ ಪ್ರಚಾರ ಬಿಟ್ಟು ರೈತರ ಬೆಂಬಲಕ್ಕೆ ನಿಲ್ಲಬೇಕೆಂದು ತಿರುಗೇಟು ನೀಡಿದ್ರು.