ಧಾರವಾಡ:ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಹಾಗೂ ಕಲಾವಿದ ಗಿರೀಶ್ ಕಾರ್ನಾಡ್ ಇಂದು ತಮ್ಮ ಇಹಲೋಕದ ಯಾತ್ರೆ ಮುಗಿಸಿದ್ದಾರೆ. ಬೆಂಗಳೂರಿನ ನಿವಾಸದಲ್ಲಿ ಕೊನೆಯುಸಿರೆಳೆದಿರುವ ಕಾರ್ನಾಡರು, ಎಲ್ಲಾ ಪ್ರತಿಭೆಗಳನ್ನು ಮೀರಿದ ಮಹಾನ್ ವ್ಯಕ್ತಿ. ನಾಟಕ, ರಂಗಕಲೆ, ಚಿತ್ರ ನಟರಾಗಿ, ನಿರ್ದೇಶಕರಾಗಿ ಹೀಗೆ ಅನೇಕ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಕಾರ್ನಾಡರಿಲ್ಲದೆ ಅಕ್ಷರ ಲೋಕ ಬಡವಾಗಿದೆ.
ಕಾರ್ನಾಡರು ಎಲ್ಲಾ ಸೀಮೆಗಳನ್ನೂ ಮೀರಿದ ಒಬ್ಬ ಮಹಾನ್ ಪ್ರತಿಭೆ. ಕನ್ನಡದಲ್ಲಿ ನಾಟಕಕಾರ, ಸಾಹಿತಿ, ರಂಗಭೂಮಿ ತಜ್ಞ, ಚಲನಚಿತ್ರ ನಟ, ನಿರ್ದೇಶಕರಾಗಿ, ಪ್ರಾಚಾರ್ಯರಾಗಿ, ಸಂಗೀತ ನಾಟಕ ಅಕಾಡೆಮಿಗಳ ಅಧ್ಯಕ್ಷರಾಗಿ ಹೀಗೆ ಅವರು ಹಲವು ರಂಗಗಳಲ್ಲಿ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದವರು.
1934 ಮೇ 19ರಂದು ಮಹಾರಾಷ್ಟ್ರದ ಮಾಥೇರದಲ್ಲಿ ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ, ಪ್ರೌಢ ಶಿಕ್ಷಣವನ್ನು ಧಾರವಾಡದ ಬಾಸೆಲ್ ಮಿಷನ್ ಹೈಸ್ಕೂಲಿನಲ್ಲಿ ಹಾಗೂ ಪದವಿ ಶಿಕ್ಷಣವನ್ನು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಮುಗಿಸಿದವರು. ಧಾರವಾಡದ ಸಾಹಿತಿಗಳೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು.
ಪೇಡಾ ನಗರಿಯ ಅಚ್ಚುಮೆಚ್ಚಿನ ವಿದ್ಯಾರ್ಥಿ ಗಿರೀಶ್ ಕಾರ್ನಾಡ್ ಕಾರ್ನಾಡರು ಇಂದು ದೈಹಿಕವಾಗಿ ನಮ್ಮೆಲ್ಲರನ್ನು ಅಗಲಿದ್ದರೂ ಮಾನಸಿಕವಾಗಿ ನಮ್ಮೆಲ್ಲರ ಜೊತೆ ಇದ್ದಾರೆ ಎಂದು ಹಿರಿಯ ಸಾಹಿತಿ ಮತ್ತು ಕಾರ್ನಾಡರ ಆತ್ಮೀಯ ಗೆಳೆಯ ಸಿದ್ದಲಿಂಗ ಪಟ್ಟಣಶೆಟ್ಟಿ ಈಟಿವಿ ಭಾರತದೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಧಾರವಾಡದಲ್ಲಿ ಪದವಿ ಪೂರ್ಣಗೊಳಿಸಿದ ನಂತರ ಪ್ರತಿಷ್ಠಿತ ರೋಡ್ಸ್ ಸ್ಕಾಲರ್ಶಿಪ್ ಪಡೆದುಕೊಂಡು ಆಕ್ಸ್ಫರ್ಡಿನಲ್ಲಿ ಹೆಚ್ಚಿನ ವ್ಯಾಸಂಗ ಮಾಡಿದ ಕಾರ್ನಾಡರು, ಆಕ್ಸ್ಫರ್ಡಿನ ಡಿಬೇಟ್ ಕ್ಲಬ್ಗೆ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಥಮ ಏಷ್ಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ನಾಟಕ ಮತ್ತು ರಂಗಭೂಮಿ ಕಲಾವಿದರಾದ ಕಾರ್ನಾಡರು, ಯಯಾತಿ, ತುಘಲಕ್, ಹಯವದನ, ನಾಗಮಂಡಲ, ತಲೆದಂಡ, ಅಗ್ನಿ ಮತ್ತು ಮಳೆ, ಅಂಜುಮಲ್ಲಿಗೆ, ಹಿಟ್ಟಿನ ಹುಂಜ, ಟಿಪ್ಪುವಿನ ಕನಸುಗಳು ಮುಂತಾದ ಪ್ರಮುಖ ನಾಟಕ ಕೃತಿಗಳನ್ನು ರಚಿಸಿದ್ದಾರೆ. ಅಲ್ಲದೆ ಧಾರವಾಡದಲ್ಲಿ ಚಿತ್ರಾ ಪಿಲ್ಮಂ ಸೊಸೈಟಿಯೊಂದನ್ನು ಹುಟ್ಟುಹಾಕಿ ಅನೇಕ ನಾಟಕ ಮತ್ತು ಚಲನಚಿತ್ರಗಳನ್ನು ಜನರಿಗೆ ಉಚಿತವಾಗಿ ಪ್ರದರ್ಶನ ಸಹ ಮಾಡುತ್ತಿದ್ದರು.
ನಾಟಕ ಸಾಹಿತ್ಯ ರಚನೆಗೆ ಜ್ಞಾನಪೀಠ ಪ್ರಶಸ್ತಿ ಪಡೆದ ಕಾರ್ನಾಡರು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ಪದ್ಮಶ್ರೀ, ಪದ್ಮಭೂಷಣ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಹಾಗೂ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಮುಡಿಗೇರಿಸಿಕೊಂಡಿದ್ದರು.
ಅಲ್ಲದೇ ಮನೋಹರ ಗ್ರಂಥಮಾಲಾ ಜೊತೆಗೆ ತಮ್ಮ ಒಡನಾಟ ಇಟ್ಟುಕೊಂಡಿದ್ದರು. ಸಾಹಿತ್ಯದಲ್ಲಿ ಬೆಳೆಯಬೇಕಾದರೆ ಮನೋಹರ ಗ್ರಂಥಮಾಲೆ ಕಾರ್ನಾಡರಿಗೆ ಸಾಹಿತ್ಯಿಕ ವಿಶ್ವವಿದ್ಯಾಲಯವಾಗಿತ್ತು. ಅಲ್ಲಿ ಕುಳಿತುಕೊಂಡು ಎಲ್ಲ ಸಾಹಿತಿಗಳನ್ನು ಭೇಟಿ ಮಾಡುತ್ತಿದ್ದರು ಹಾಗೂ ಧಾರವಾಡದ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿರುವ ಬಾವಿಯಲ್ಲಿ ಸ್ವಿಮ್ಮಿಂಗ್ ಮಾಡುತ್ತಿದ್ದರಂತೆ.
ಒಡನಾಡಿ ಅಬ್ದುಲ್ ಖಾನ್ ಕಾರ್ನಾಡರ ನಿಧನದಿಂದ ಭಾವುಕರಾಗಿದ್ದರು. ಪೇಡಾ ನಗರಿಯೊಂದಿಗೆ ವಿಶೇಷ ನಂಟು ಹೊಂದಿರುವ ಕಾರ್ನಾಡರಿಗೆ ಧಾರವಾಡದ ಎಲ್ಲ ಸಾಹಿತಿಗಳು ಕಂಬನಿ ಮಿಡಿದಿದ್ದಾರೆ. ಬಾಸೆಲ್ ಮಿಶನ್ ಹೈಸ್ಕೂಲ್ನಲ್ಲಿ ವಿದ್ಯಾರ್ಥಿಗಳು ಅಗಲಿದ ಕಾರ್ನಾಡರಿಗೆ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.
ಚಿತ್ರರಂಗ ಮತ್ತು ರಂಗಭೂಮಿಗೆ ತಮ್ಮದೇ ಆದ ಕೊಡುಗೆ ನೀಡಿದ್ದ ಕಾರ್ನಾಡರಿಗೆ ರಾಜ್ಯ ಅಷ್ಟೆ ಅಲ್ಲದೆ ರಾಷ್ಟ್ರವ್ಯಾಪಿ ಕಂಬನಿ ವ್ಯಕ್ತವಾಗಿದೆ. ಧಾರವಾಡದಲ್ಲಿ ಬೆಳೆದ ಬಹುಮುಖ ಪ್ರತಿಭೆ ಅಗಲಿಕೆಯಿಂದ ನಾಡಿನ ಜನರಿಗೆ ತುಂಬಲಾರದ ನಷ್ಟವಾಗಿದೆ ಎಂದು ಸಾಹಿತಿಗಳು ಕಂಬನಿ ಮಿಡಿದಿದ್ದಾರೆ.