ಹುಬ್ಬಳ್ಳಿ:ನಗರದ ಕೆಎಲ್ಇ ಕಾಲೇಜಿನಲ್ಲಿ ಪಾಕ್ ಪರ ಘೋಷಣೆ ಕೂಗಿದ ಮೂವರು ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಇಂದು ಬೆಳಗ್ಗೆ ನಗರದ 3ನೇ ಜೆಎಂಎಫ್‌ಸಿ ಕೋರ್ಟ್ಗೆ ಹಾಜರುಪಡಿಸಲಾಗಿದೆ.
ನಿನ್ನೆ ರಾತ್ರಿ ಮೂವರು ಕಾಶ್ಮೀರಿ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ವಿದ್ಯಾರ್ಥಿಗಳನ್ನು ಸಿಆರ್ಪಿಸಿ 169 ಬಾಂಡ್ ಮೇಲೆ ಗೋಕುಲ್ ರೋಡ್ ಠಾಣೆ ಪೊಲೀಸರು ಬಿಡುಗಡೆ ಮಾಡಿದ್ದರು. ಇದನ್ನು ಖಂಡಿಸಿ ನಿನ್ನೆ ರಾತ್ರಿ ಭಜರಂಗದಳ ಸೇರಿ ವಿವಿಧ ಸಂಘಟನೆಗಳು ಗೋಕುಲ್ ರೋಡ್ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿ, ಪೊಲೀಸ್ ಕಮೀಷನರ್ಗೆ ಮುತ್ತಿಗೆ ಹಾಕಿ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದ್ದರು.
ಪಾಕ್ ಪರ ಘೋಷಣೆ ಕೂಗಿದ್ದ ಆರೋಪಿಗಳಿಗೆ ನ್ಯಾಯಾಂಗ ಬಂಧನ.. ಇದರಿಂದ ಇಕ್ಕಟ್ಟಿಗೆ ಸಿಲುಕಿದ ಪೊಲೀಸರು, ಪರಿಸ್ಥಿತಿ ಕೈಮೀರಿದ್ದನ್ನು ಅರಿತು ರಾತ್ರೋರಾತ್ರಿ ಮತ್ತೆ ಆರೋಪಿಗಳಾದ ಅಮೀರ್, ಬಾಸಿತ್ ಹಾಗೂ ತಾಲಿಬ್ನನ್ನು ಬಂಧಿಸಿ ನಿನ್ನೆ ರಾತ್ರಿಯೇ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಆದರೆ, ನಿನ್ನೆ ಭಾನುವಾರ ಆದ ಕಾರಣ ಇಂದು ಬೆಳಗ್ಗೆ 3ನೇ ಜೆಎಂಎಫ್‌ಸಿ ಕೋರ್ಟ್ಗೆ ಹಾಜರುಪಡಿಸಲಾಗಿದೆ.
ದೇಶದ್ರೋಹ ಘೋಷಣೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಶ್ರೀಮತಿ ಪುಷ್ಪಾವತಿ ಜೋಗೋಜಿ ಅವರು, ಮಾರ್ಚ್ 2ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದ್ದಾರೆ. ಆರೋಪಿಗಳು ಕೋರ್ಟ್ ಆವರಣ ಪ್ರವೇಶಿಸುತ್ತಿದ್ದಂತೆ ವಕೀಲರು 'ಭಾರತ ಮಾತಾ ಕಿ ಜೈ' ಘೋಷಣೆ ಕೂಗಿದ ಪ್ರಸಂಗವೂ ನಡೆಯಿತು.